ಭವಿಷ್ಯದ ಹಿತದೃಷ್ಟಿಯಿಂದ ಅರಣ್ಯ ಹಾಗೂ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು – ಕುಲಪತಿ ಎಂ ವಿ ಧನಂಜಯ್
ಆನಂದಪುರ : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನವ ಮತ್ತು ವನ್ಯಜೀವಿಗಳ ಸಂಘರ್ಷವು ಗಂಭೀರವಾಗಿದ್ದು, ಕಳವಳಕ್ಕೆ ಕಾರಣವಾಗಿದೆ. ಆದ್ದರಿಂದ ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಅರಣ್ಯ ಹಾಗೂ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಎಂ. ವಿ ಧನಂಜಯ ಕರೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ವನ್ಯಜೀವಿ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಮತ್ತು ಮಾನವನ ನಡುವಿನ ಸಮತೋಲನ ತಪ್ಪುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು.
ಜನಸಂಖ್ಯೆಯ ತೀವ್ರ ಬೆಳವಣಿಗೆ ಹಾಗೂ ಅತಿಯಾದ ಮಾನವ ಹಸ್ತಕ್ಷೇಪದಿಂದಾಗಿ ನಾವು ಶ್ರೀಮಂತ ಮತ್ತು ದಟ್ಟವಾದ ಕಾಡುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕಾಡುಗಳ ವ್ಯಾಪ್ತಿ ಕುಗ್ಗಿದ್ದರಿಂದ ವನ್ಯಜೀವಿಗಳು ಆಹಾರ ಮತ್ತು ನೀರಿಗಾಗಿ ನಾಡಿನತ್ತ ಬರುತ್ತಿವೆ. ವಾಸ್ತವವಾಗಿ ವನ್ಯಜೀವಿಗಳು ನಮ್ಮ ಜಾಗಕ್ಕೆ ಬರುತ್ತಿಲ್ಲ, ಬದಲಿಗೆ ನಾವೇ ಅವುಗಳ ಸ್ವಾಭಾವಿಕ ಆವಾಸ ಸ್ಥಾನವನ್ನು ಆಕ್ರಮಿಸಿಕೊಂಡು ಅವುಗಳಿಗೆ ವಿರೋಧಿಗಳಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಡು ಮತ್ತು ಪರಿಸರದ ಸಂರಕ್ಷಣೆಯ ಮಹತ್ವವನ್ನು ಗ್ರಾಮೀಣ ಭಾಗದಲ್ಲಿ ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸವಾಗಬೇಕಿದೆ. ಕಾಡಿನಲ್ಲಿ ಹರಡುತ್ತಿರುವ ಕಳೆ ಸಸ್ಯಗಳನ್ನು ನಿಯಂತ್ರಿಸಿ, ಸ್ಥಳೀಯ ಸಸ್ಯವರ್ಗ ಮತ್ತು ಅಮೂಲ್ಯವಾದ ಔಷಧೀಯ ಸಸ್ಯಗಳನ್ನು ಉಳಿಸಿ ಬೆಳೆಸಬೇಕು. ಇಂತಹ ಅರಣ್ಯ ಆಧಾರಿತ ಔಷಧೀಯ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಮೌಲ್ಯವರ್ಧನೆ ಮಾಡಿ ಸಮರ್ಥವಾಗಿ ಬಳಸಿಕೊಳ್ಳುವ ಜ್ಞಾನ ಎಲ್ಲರಿಗೂ ತಲುಪಬೇಕಾಗಿದೆ ಎಂದು ಹೇಳಿದರು.
ನಮ್ಮ ಮನೆ, ಸುತ್ತಮುತ್ತಲಿನ ಕೆರೆ-ಕಟ್ಟೆಗಳು ಹಾಗೂ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಂಡು ಹಸಿರನ್ನು ವೃದ್ಧಿಸುವುದು ಇಂದಿನ ತುರ್ತು ಅಗತ್ಯ. ಪ್ರಕೃತಿಯನ್ನು ರಕ್ಷಿಸದೆ ಮಾನವನ ಉಳಿವಿಲ್ಲ ಎಂಬುದನ್ನು ಅರಿತು, ಇಂದಿನಿಂದಲೇ ಪ್ರತಿಯೊಬ್ಬರೂ ಕಾಡು ಮತ್ತು ಪರಿಸರವನ್ನು ಸಂರಕ್ಷಿಸಿ ಪೋಷಿಸುವ ದೃಢ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್ ಮಾತನಾಡಿ, “ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಕಾಡುಗಳು ತುಂಡಾಗುತ್ತಿದ್ದು, ಪ್ರಾಣಿಗಳ ಸ್ವಾಭಾವಿಕ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಾಣಿಗಳ ಆವಾಸಸ್ಥಾನಗಳನ್ನು ಜೋಡಿಸುವ ಮೂಲಕ ಮಾತ್ರ ಸಂಘರ್ಷ ತಡೆದು ವನ್ಯಸಂಪತ್ತನ್ನು ರಕ್ಷಿಸಲು ಸಾಧ್ಯ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
“ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರತಿಯೊಂದು ವನ್ಯಜೀವಿಯ ಪಾತ್ರವೂ ಮಹತ್ವವಾಗಿದ್ದು, ನಶಿಸುತ್ತಿರುವ ಅರಣ್ಯ ಪ್ರದೇಶಗಳನ್ನು ಮರುಜೋಡಿಸುವುದು ಹಾಗೂ ವನ್ಯಜೀವಿಗಳ ಆವಾಸಸ್ಥಾನ ರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಯುವ ಪೀಳಿಗೆ, ಅದರಲ್ಲೂ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು, ಎಂದು ಕರೆ ನೀಡಿದರು.
ಎಂ. ಫಯಾಜುದ್ದೀನ್ ಮಾತನಾಡಿ, ವನ್ಯಜೀವಿ ಸಂರಕ್ಷಣೆ ಎಂದರೆ ಕೇವಲ ಪ್ರಾಣಿಗಳನ್ನು ಪ್ರತ್ಯೇಕವಾಗಿ ನೋಡುವುದಲ್ಲ, ಅವುಗಳ ನೈಸರ್ಗಿಕ ನೆಲೆಯನ್ನು ಉಳಿಸಿಕೊಳ್ಳುವುದಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ದೂಷಿಸುವ ಮುನ್ನ, ನಾವು ಅವುಗಳ ಜಾಗವನ್ನು ಅತಿಕ್ರಮಿಸುತ್ತೇವೆ ಎಂಬುದನ್ನು ಅರಿಯಬೇಕಾಗಿದೆ. ಮಾನವ ಹಾಗೂ ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ವೈಜ್ಞಾನಿಕ ಯೋಜನೆಗಳು ಮತ್ತು ಸಹಬಾಳ್ವೆಯ ಮನೋಭಾವ ಇಂದು ತುರ್ತಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಡೀನ್ ಡಾ. ತಿಪ್ಪೇಶಪ್ಪ ಜಿ.ಎನ್ ವಹಿಸಿದ್ದರು. ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





