ಆನಂದಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಸತಿ ಗೃಹದಲ್ಲಿ ಅಕ್ಕ ಕ್ಯಾಂಟೀನ್ – ಅಹೋರಾತ್ರಿ ಧರಣಿ
ಆನಂದಪುರ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ವೈದ್ಯರ ವಸತಿ ಕಟ್ಟಡದಲ್ಲಿ ಅಕ್ಕ ಕ್ಯಾಂಟೀನ್ ತೆರೆಯಲು ಇರುವ ಕಟ್ಟಡವನ್ನು ವಿರೂಪಗೊಳಿಸಿ ಮರು ವಿನ್ಯಾಸಗೊಳಿಸಿತ್ತಿರುವುದನ್ನು ಖಂಡಿಸಿ ಪತ್ರಕರ್ತ ಬಿಡಿ ರವಿಕುಮಾರ್ ನೇತೃತ್ವದಲ್ಲಿ ಆಸ್ಪತ್ರೆಯ ಮುಂಭಾಗ ಅಹೋರಾತ್ರಿ ನಡೆಸಲಾಗುತ್ತಿದೆ.
ವೈದ್ಯರ ವಸತಿಗಾಗಿ ಮೀಸಲಾಗಿದ್ದ ಕಟ್ಟಡವನ್ನು ಯಾವುದೇ ಕಾರಣಕ್ಕೂ ಅಕ್ಕ ಕ್ಯಾಂಟೀನ್ ತೆರೆಯಲು ಅವಕಾಶ ನೀಡಬಾರದು. ಸುಭದ್ರವಾದ ಕಟ್ಟಡವನ್ನ ವಿರೂಪಗೊಳಿಸಿ ಮರು ವಿನ್ಯಾಸಗೊಳಿಸುವ ಮೊದಲು ಸಂಬಂಧಪಟ್ಟ ಇಲಾಖೆಯ ತಾಂತ್ರಿಕ ಆಡಳಿತಾತ್ಮಕ ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಇಲ್ಲಿ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ಸರ್ಕಾರದ ಆದೇಶದಿಂದಾಗಿ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯರ ವರ್ಗಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿದರೆ ವಸತಿ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಯನ್ನು ಅರಿಯದೆ ಸುಸ್ಥಿರವಾದ ಕಟ್ಟಡವನ್ನ ಅಕ್ಕ ಕ್ಯಾಂಟೀನ್ ಆಗಿ ಬದಲಾಯಿಸುತ್ತಿರುವ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ವೈದ್ಯರ ವಸತಿಗಾಗಿ ನಿರ್ಮಾಣ ಮಾಡಲಾಗಿದ್ದ ವಸತಿ ಗೃಹವನ್ನು ಅಕ್ಕ ಕ್ಯಾಂಟೀನ್ ಗೆ ಬಳಸಲು ಅನುಮತಿ ನೀಡಿರುವುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡಲು 15 ಲಕ್ಷ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಬಹಳಷ್ಟು ಜಾಗವಿದ್ದು, ಸೂಕ್ತ ಜಾಗವನ್ನು ಆಯ್ಕೆ ಮಾಡಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಮಾತನಾಡಿ, ಸಾಗರ ತಾಲೂಕಿನಲ್ಲಿಯೇ ಆನಂದಪುರ ಹೋಬಳಿ ಬಹು ವಿಸ್ತಾರವಾಗಿರುವುದರಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಹಲವು ಸೌಲಭ್ಯಗಳು ಸಿಗಬೇಕು. ಆದರೆ ಈ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರಿಲ್ಲದೆ ಬಡ ರೋಗಿಗಳು ಪರದಾಡುವಂತಾಗಿದೆ. ಸಣ್ಣಪುಟ್ಟ ಹಾಗೂ ತುರ್ತು ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂದಪುರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಆದರೆ ಆನಂದಪುರದಲ್ಲಿ 108 ಸೌಲಭ್ಯ ಸಿಗದೇ ಇರುವುದರಿಂದ ತುರ್ತು ಚಿಕಿತ್ಸೆ ಸಿಗದೆ ಹಲವು ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಮನವಿಗಳನ್ನು ಮಾಡಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಕ್ಷಾ ಸಮಿತಿಯಲ್ಲಿದ್ದ 20 ಲಕ್ಷ ಹಣದ ಖರ್ಚಿನ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಬೇಕು. ವೈದ್ಯರ ವಸತಿ ಕಟ್ಟಡವನ್ನು ಈ ಹಿಂದೆ ಯಾವ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿದಿಯೋ ಮೂಲ ಉದ್ದೇಶಕ್ಕೆ ಬಳಸಬೇಕು. 108 ವಾಹನದ ವ್ಯವಸ್ಥೆಯನ್ನು ಕೂಡಲೇ ನೀಡಬೇಕು. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಬಂದು ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಹೋರಾತ್ರಿ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಲಾಯನ ಗೈದ ತಾಲೂಕು ವೈದ್ಯಾಧಿಕಾರಿ ರವೀಂದ್ರ
ಪ್ರತಿಭಟನಾ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ರವೀಂದ್ರ ಅವರು ಬಂದ ತಕ್ಷಣ, ಸಾರ್ವಜನಿಕರು ವೈದ್ಯರ ವಸತಿ ಕಟ್ಟಡದ ವಿರೂಪ, 108 ವ್ಯವಸ್ಥೆ ಇಲ್ಲದಿರುವುದು, ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ವೈದ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ರವೀಂದ್ರ ಅವರು ನಿಮ್ಮ ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದ ತಕ್ಷಣ ಇನ್ನಷ್ಟು ಆಕ್ರೋಶಗೊಂಡ ಸಾರ್ವಜನಿಕರು ಜಿಲ್ಲಾ ವೈದ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನಾ ಸ್ಥಳದಲ್ಲಿಯೇ ಇರಬೇಕು ಎಂದು ಪಟ್ಟು ಹಿಡಿದರು. ಇದರಿಂದ ವಿಚಲಿತಗೊಂಡ ತಾಲೂಕು ವೈದ್ಯಾಧಿಕಾರಿಗಳು ಸರಿಯಾದ ವಿವರಣೆ ನೀಡದೆ ಆಸ್ಪತ್ರೆಯ ಇನ್ನೊಂದು ಬಾಗಿಲಿನಿಂದ ಪಲಾಯನ ಮಾಡಿದ್ದಾರೆ.
ಬೆಂಬಲ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳು
ಆನಂದಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಮೋಹನ್, ಗುರುರಾಜ್, ದಲಿತ ಸಂಘರ್ಷ ಸಮಿತಿಯ ರೇವಪ್ಪ ಹೊಸಕೊಪ್ಪ, ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕರುಗಳು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿದಂತೆ ವಿವಿಧ ಸಂಘಟನೆ ಮುಖಂಡರುಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.





