ಅನುಪಯುಕ್ತ ಕಟ್ಟಡದಲ್ಲಿ ಅಕ್ಕ ಕ್ಯಾಂಟೀನ್ ತೆರೆಯಲು ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಮುಖಂಡರು
ಆನಂದಪುರ ; ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿದ ಪತ್ರಕರ್ತ ರವಿಕುಮಾರ್ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ್ ವಿರುದ್ಧ ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದ 17 ಜಿಲ್ಲೆಗಳಿಗೆ ಅಕ್ಕ ಕ್ಯಾಂಟೀನ್ ನೀಡಲಾಗಿದ್ದು, ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಇಚ್ಛಾಶಕ್ತಿಯಿಂದಾಗಿ ತಾಲೂಕಿನ ಆನಂದಪುರಕ್ಕೆ ದೊರೆತಿರುವುದು ಸಂತಸದ ವಿಷಯವಾಗಿದೆ. ಒಂದು ಸುಸರ್ಜಿತವಾದ ಕಟ್ಟಡ ನಿರ್ಮಾಣವಾಗಬೇಕಾದರೆ 50 ಲಕ್ಷ ಬೇಕಾಗುತ್ತದೆ. ಆದರೆ ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡಲು 15 ಲಕ್ಷ ಬಂದಿದ್ದು, ಆದ್ದರಿಂದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 25 ವರ್ಷದ ಹಳೆಯದಾದ ಹಾಗೂ ಉಪಯೋಗಿಸದೆ ಇರುವ ಕಟ್ಟಡವನ್ನು ಮರು ವಿನ್ಯಾಸಗೊಳಿಸಿ ಉಪಯೋಗಿಸಲಾಗುತ್ತದೆ ಎಂದು ಹೇಳಿದರು.
ಸಂಪೂರ್ಣ ವಿಡಿಯೋ ಇಲ್ಲಿದೆ
ಅಕ್ಕ ಕ್ಯಾಂಟೀನ್ ನಿರ್ಮಾಣದಿಂದ ಆಸ್ಪತ್ರೆಗೆ ಬರುವ ಆನಂದಪುರ ಹಾಗೂ ಸುತ್ತಮುತ್ತಲಿನ ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಊಟ ಉಪಹಾರ ಸಿಗಬೇಕು ಎನ್ನುವುದು ಮೂಲ ಉದ್ದೇಶವಾಗಿದೆ. ಶಾಸಕರ ಅಭಿವೃದ್ಧಿ ಕೆಲಸಗಳನ್ನು ಹಾಗೂ ಜನರ ಪ್ರೀತಿಯನ್ನು ಸಹಿಸಲಾಗದೆ ವಿರೋಧ ಮಾಡುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ್ ಹೊನಗೋಡು ಹಾಗೂ ಪತ್ರಕರ್ತ ಬಿ.ಡಿ ರವಿಕುಮಾರ್ ವಿರುದ್ಧ ಹರಿಹಾಯ್ದರು.
ಪತ್ರಕರ್ತ ರವಿಕುಮಾರ್ ಅವರು ಜನರಿಗೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳ ಬಗ್ಗೆ ಎಂದಿಗೂ ಹೋರಾಟ ಮಾಡಿರಲಿಲ್ಲ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ವಿವಿಧಡೆ ಭೂಕಬಳಿಕೆ ಮಾಡಿದ ಸಂದರ್ಭದಲ್ಲಿ ಯಾಕೆ ಧರಣಿ ಕೂರಲಿಲ್ಲ. ಈ ಹಿಂದೆ ವೈದ್ಯರಿಗೆ ಹೊಡೆದಾಗ ಸಾಮಾಜಿಕ ಕಳಕಳಿ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಅಕ್ಕ ಕ್ಯಾಂಟೀನ್ ನಿರ್ಮಾಣ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಕೆಲಸಗಾರರ ಬಳಿ ಹಣ ಪಡೆದಿರುವ ವಿಚಾರ ನಮಗೆ ತಿಳಿದಿದೆ. ಅಕ್ಕ ಕ್ಯಾಂಟೀನ್ ನಿರ್ಮಾಣವನ್ನು ಸಹಿಸಲಾಗದೆ ಹೋಟೆಲ್ ಮಾಲೀಕರು ಹಣವನ್ನು ನೀಡಿ ಪ್ರತಿಭಟನೆ ಮಾಡಿಸಿದ್ದಾರೆಯೋ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಅನಿತಾ ಕುಮಾರಿ ಮಾತನಾಡಿ, ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡುವುದರಿಂದ ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದರ ಜೊತೆಗೆ ಬಡವರಿಗೆ ಕಡಿಮೆ ವೆಚ್ಚದಲ್ಲಿ ಊಟವನ್ನು ನೀಡುವ ಉತ್ತಮ ಯೋಜನೆಯಾಗಿದೆ. ಇಂತಹ ಜನಪರ ಯೋಜನೆಯ ಬಗ್ಗೆ ಆರೋಪ ಮಾಡುವುದು ಸರಿಯಲ್ಲ.
ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಹೊಸದಾದ ವೈದ್ಯರ ವಸತಿ ಗೃಹಗಳಿವೆ. ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಈ ವಸತಿಗೃಹ ಅನುಪಯುಕ್ತ ವಾಗಿರುವ ಹಿನ್ನೆಲೆಯಲ್ಲಿ ಇರುವ ಕಡಿಮೆ ಹಣದಲ್ಲಿ ಸುಂದರವಾಗಿ ನಿರ್ಮಾಣ ಮಾಡಬಹುದು ಎನ್ನುವ ಉದ್ದೇಶದಿಂದ ಇಲ್ಲಿ ನಿರ್ಮಿಸಲಾಗುತ್ತಿದೆ. ಸಾಮಾಜಿಕ ಕಳಕಳಿ ಇರುವ ಪತ್ರಕರ್ತರು ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಮಾತನಾಡಿ, ಶಾಸಕರು ಒಂದು ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಅಕ್ಕ ಕ್ಯಾಂಟೀನ್ ತೆರೆಯಲು ಹೊರಟಿರುವುದನ್ನ ಪತ್ರಕರ್ತ ರವಿಕುಮಾರ್ ವಿರೋಧಿಸಿರುವುದು ಖಂಡನೀಯ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಾಕರ್ ಹೊನಗೋಡು ಅವರು ಹಾಗೂ ಪತ್ರಕರ್ತ ರವಿಕುಮಾರ್ ಅವರು ತಮ್ಮ ವ್ಯಾಪ್ತಿಯಲ್ಲಿ ಇರಬೇಕು. ಇಲ್ಲದಿದ್ದರೆ ನಿಮ್ಮ ಅವ್ಯವಹಾರಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಲಿಂಗರಾಜು ಮಾತನಾಡಿ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ ನೂರಾರು ಜನ ಲ್ಯಾಬ್ ಹಾಗೂ ಇನ್ನಿತರ ಪರೀಕ್ಷೆಗಳಿಗೆ ಉಪವಾಸ ಬರುತ್ತಾರೆ. ಕೆಲವು ಸಂದರ್ಭದಲ್ಲಿ ಎರಡು ಮೂರು ಪರೀಕ್ಷೆಗಳಿದ್ದಾಗ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ರೋಗಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಕ್ಕ ಕ್ಯಾಂಟೀನ್ ತೆರೆಯಲಾಗುತ್ತಿದೆ. ತಾಲೂಕಿನಲ್ಲಿ ಬಗರುಕುಂ ಸಮಸ್ಯೆ, ಶರವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇನ್ನಿತರ ಹಲವಾರು ಸಮಸ್ಯೆಗಳು ಇದ್ದು, ಅವುಗಳ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು
ಆನಂದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಜೇಂದ್ರ, ಮುಖಂಡರಾದ ಲಿಂಗರಾಜ್, ಉಮೇಶ್ ಎನ್, ಸಿರಿಜಾನ್, ಆನಂದ ಹರಟೆ, ಶರತ್ ನಾಗಪ್ಪ, ಗಿರೀಶ್ ಕೊವಿ, ಬಸವರಾಜ್, ರಹಮತ್ ವುಲ್ಲಾ, ರಮಾನಂದ, ನಜಿರ್ ವುಲ್ಲಾಖಾನ್, ಖಲಿಮುಲ್ಲಾ ಖಾನ್, ಅಬ್ದುಲ್ ರಜಾಕ್, ರವಿ ಯಡೇಹಳ್ಳಿ ಉಪಸ್ಥಿತರಿದ್ದರು.
ಸಂಪೂರ್ಣ ವಿಡಿಯೋ ಇಲ್ಲಿದೆ





