ಸಾಗರ : ಸಾಲಬಾಧೆ ತಾಳಲಾರದೆ ಕೊಳಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ
ಸಾಗರ : ಜೀವ ನಿರ್ವಹಣೆಗೆ ಮಾಡಿದ ಕೈಗಡ ಸಾಲ ತೀರಿಸಲಾಗದೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಆನಂದಪುರ ಸಮೀಪದ ಮಲಂದೂರು ಗ್ರಾಮದಲ್ಲಿರುವ ಮಹಂತಿನ ಮಠದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಚಾಂದಪಾಷಾ (46) ಎಂದು ಗುರುತಿಸಲಾಗಿದ್ದು, ತಾಲೂಕಿನ ಆನಂದಪುರ ಸಮೀಪದ ದಾಸಕೊಪ್ಪ ಗ್ರಾಮದ ನಿವಾಸಿಯಾಗಿದ್ದು, ಡ್ರೈವರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಯಾವುದೇ ಕೆಲಸವಿಲ್ಲದೆ ಜೀವನ ಸಾಗಿಸಲಾಗದೆ ಕಷ್ಟಪಡುತ್ತಿದ್ದರು ಎನ್ನಲಾಗುತ್ತಿದೆ.
ಕೆಲಸವಿಲ್ಲದೆ ಜೀವನ ಸಾಗಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಇದರಿಂದ ಮನನೊಂದು ಸೆ. 30 ರಂದು ಸಂಜೆ 6.30 ಕ್ಕೆ ಮನೆ ಬಿಟ್ಟು ಹೋಗುತ್ತಾರೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಅಕ್ಟೋಬರ್ 1ರ ಮುಂಜಾನೆ 7:30 ರ ಸಮಯದಲ್ಲಿ ಮಹಂತಿನ ಮಠದ ಚಂಪಕ ಸರಸು ಕೊಳದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ನಂತರ ಶವವನ್ನು ಮೇಲಕ್ಕೆತ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





