ಹಕ್ಕು ಪತ್ರಕ್ಕಾಗಿ ಸೆ. 7 ರಂದು ಸಾಗರದಲ್ಲಿ ಅನಿರ್ದಿಷ್ಟಾವಧಿ ಹೋರಾಟ.
ಸಾಗರ : ಹಕ್ಕು ಪತ್ರಕ್ಕಾಗಿ ಸೆಪ್ಟೆಂಬರ್ 7 ರಂದು ಸಾಗರದ ಉಪವಿಭಾಗಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಹೇಳಿದರು.
ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಾಗರ ತಾಲೂಕಿನ ಆನಂದಪುರ ಹೋಬಳಿಯ ದಾಸಕೊಪ್ಪ, ಯಡೆಹಳ್ಳಿ ಹಾಗೂ ಮುರುಘಾಮಠ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳು ಸುಮಾರು 75ರಿಂದ 80 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಹಕ್ಕು ಪತ್ರಗಳಿಲ್ಲದೆ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ದಾಸಕೊಪ್ಪ, ಯಡೆಹಳ್ಳಿ ಹಾಗೂ ಮುರುಘಾಮಠ ಗ್ರಾಮದಲ್ಲಿ 100 ವರ್ಷಗಳಿಂದ ವಾಸಿಸುತ್ತಿರುವ ಅಲ್ಲಿನ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು , ನೀವು ವಾಸಿಸುತ್ತಿರುವ ಜಾಗ ಖಾಸಗಿ ಜಮೀನು ಆಗಿದ್ದು, ಮಂಜೂರಾತಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಇಂತಹ ಪ್ರಕರಣಗಳು ರಾಜ್ಯಾದ್ಯಂತ ಇರುವ ಹಿನ್ನೆಲೆಯಲ್ಲಿ ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪನವರು 2016-17ರಲ್ಲಿ ವಾಸಿಸುವನೇ ಮನೆ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಒಂದು ಗ್ರಾಮದಲ್ಲಿ ಹತ್ತಕ್ಕಿಂತ ಹೆಚ್ಚು ಮನೆಗಳಿದ್ದಲ್ಲಿ ವಾಸಿಸುವ ಜಾಗವು ಅರಣ್ಯ, ಕಂದಾಯ ಇಲ್ಲವೇ ಖಾಸಗಿ ಜಮೀನು ಆಗಿದ್ದರೂ ಸಹ ಮಂಜುರಾತಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದರು.
ಇದರ ಆಧಾರದ ಮೇಲೆ ಇಲ್ಲಿನ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಕ್ಕುಪತ್ರ ನೀಡುವ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಸಾಗರದ ಉಪವಿಭಾಗಾಧಿಕಾರಿ ವಾಸ್ತು ಸರಿ ಇಲ್ಲ ಎಂಬ ಕಾರಣ ನೀಡಿ ಕಚೇರಿಗೆ ಬೀಗ ಹಾಕಿದ್ದಾರೆ. ಇದಲ್ಲದೆ ಡಿಎಫ್ಓ ಅವರು ಸಾರ್ವಜನಿಕರ ಭೇಟಿಯನ್ನು ಮೂರು ಗಂಟೆಯ ನಂತರ ಎಂದು ನಾಮಫಲಕ ಹಾಕಿದ್ದಾರೆ. ಸರ್ಕಾರಿ ಕಚೇರಿಗಳು ಇರುವುದು ಸಾರ್ವಜನಿಕರ ಸೇವೆಗಾಗಿ. ಆದರೆ ತಾಲೂಕಿನಲ್ಲಿ ಅಧಿಕಾರಿಗಳನ್ನು ಕೇಳುವವರು ಹೇಳುವವರು ಇಲ್ಲದ ಕಾರಣದಿಂದಾಗಿ ತಮ್ಮ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಆನಂದಪುರದ ಹೋಬಳಿಯ ದಾಸಕೊಪ್ಪ, ಯಡೆಹಳ್ಳಿ ಹಾಗೂ ಮುರುಘಾಮಠದಲ್ಲಿ ವಾಸಿಸುವ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಹಕ್ಕು ಪತ್ರ ನೀಡದಿರುವುದನ್ನು ಸಹಿಸುವುದಿಲ್ಲ. ಈ ಕಾರಣಕ್ಕಾಗಿ ಸೆಪ್ಟೆಂಬರ್ 7 ರಂದು ಎಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು. ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಭರವಸೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಬೆಂಬಲ ಸೂಚಿಸಿದ ದಲಿತ ಸಂಘರ್ಷ ಸಮಿತಿ
ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರದ ರೇವಪ್ಪ ಹೊಸಕೊಪ್ಪ ಮಾತನಾಡಿ, ನಮ್ಮ ಸಮುದಾಯಕ್ಕೆ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸುತ್ತೇವೆ. ಅಲ್ಲದೆ ಈ ಹೋರಾಟಕ್ಕೆ ನಮ್ಮ ಬೆಂಬಲವನ್ನು ಸೂಚಿಸಿ ಧರಣಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ದಾಸಕೊಪ್ಪ, ಷಣ್ಮುಖಪ್ಪ ಯಡೆಹಳ್ಳಿ, ಶಾಂತಪ್ಪ ಆಚಾಪುರ, ಪ್ರಮುಖರಾದ ನಾಗರಾಜ್, ಮುಜಾಹಿದ್ ಖಾನ್, ಪರಮೇಶ್ ಕಣ್ಣೂರ್ ಸೇರಿದಂತೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಪ್ರಮುಖರು ಉಪಸ್ಥಿತರಿದ್ದರು.





