ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ದೆಹಲಿಗೆ ಅಡಿಕೆ ನಿಯೋಗ : ಕಳಪೆ ಅಡಿಕೆಗೆ ಬ್ರೇಕ್
ಶಿವಮೊಗ್ಗ : ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಭೇಟಿ ನೀಡಿದ ಫಲವಾಗಿ ಕಳಪೆ ಅಡಿಕೆ ಚಾಲಕ್ಕೆ ಬ್ರೇಕ್ ಬಿದ್ದಿದೆ.
ಈ ವಿಷಯವಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಸಂಸದರು, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರುಗಳ ಜೊತೆ ದೆಹಲಿಯಲ್ಲಿ ಗೃಹ ಮಂತ್ರಿ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ಮಾಡಿ ವಿದೇಶದಿಂದ ಕಾನೂನು ಬಾಹಿರವಾಗಿ ಆಮದು ಆಗುತ್ತಿದ್ದ ಅಡಿಕೆಯ ಬಗ್ಗೆ ವಿಶೇಷವಾಗಿ ಮನವಿ ಸಲ್ಲಿಸಿ, ಚರ್ಚೆ ನಡೆಸಲಾಯಿತು.
ಪರಿಣಾಮವಾಗಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದದ ನಿಯಮಾವಳಿಗಳನ್ನು ದುರುಪಯೋಗ ಮಾಡಿಕೊಂಡು ಇಂಡೋನೇಷ್ಯಾ, ಮಲೇಶಿಯಾ ಮುಂತಾದ ರಾಷ್ಟ್ರಗಳ ಕಳಪೆ ಅಡಿಕೆಯನ್ನು ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸಿ ಮಾರಾಟ ಮಾಡುತಿದ್ದ ಬೃಹತ್ ಜಾಲವನ್ನು ಹಿಡಿದಿದ್ದಾರೆ. ಜೊತೆಗೆ 9 ಜನರನ್ನ ಬಂಧನ ಮಾಡಲಾಗಿದೆ. 2500 ಕೋಟಿ ಕಸ್ಟಮ್ ಸುಂಕವನ್ನ ವಂಚಿಸುವ ಪ್ರಕರಣವನ್ನು ಭೇದಿಸಿದ್ದಾರೆ. ಅಲ್ಲದೆ ನೂರಾರು ಟನ್ ಕಳಪೆ ಅಡಿಕೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮುಂದೆಯೂ ಸಹ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಅಡಿಕೆ ಸಹಕಾರ ಸಂಘಗಳ ಮಹಾಮಂಡಳಿ, ಸಂಸದರಾದ ಬಿ.ವೈ ರಾಘವೇಂದ್ರ, ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ವಿವಿಧ ಮಂಡಳಿಗಳ ಅಧ್ಯಕ್ಷರುಗಳು ನಿಯೋಗದಲ್ಲಿ ಭಾಗವಹಿಸಿ ಸಹಕಾರ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ





