ಆನಂದಪುರ : ಕಳೆದ ಒಂದೆರಡು ತಿಂಗಳುಗಳಿಂದ ಕೊಳಚೆ ನೀರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಹರಿಯುತ್ತಿದ್ದರೂ ಗ್ರಾಮಾಡಳಿತ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗದಿಂದ ಸಾಗರಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 69 ಆನಂದಪುರದಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾದ ಪರಿಣಾಮವಾಗಿ ಚರಂಡಿ ಇದಿಯೋ ಇಲ್ಲವೋ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಪರಿಣಾಮವಾಗಿ ಕೊಳೆಚೆ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿದೆ.
ಕೊಳಚೆ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ಪಾದಾಚಾರಿಗಳು ನಡೆದುಕೊಂಡು ಹೋಗುವುದು ಅಸಾಧ್ಯವಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನಗಳು ರಭಸವಾಗಿ ಹೋಗುವುದರಿಂದ ಕೊಳೆಚೆ ನೀರು ಮೈಮೇಲೆ ಹಾರಿದ ಸಂದರ್ಭಗಳು ಸಹ ನಡೆದಿದೆ. ಕೊಳಚೆ ನೀರಿನ ವಾಸನೆಯಿಂದಾಗಿ ಅಂಗಡಿ ಮಾಲೀಕರು ತಮ್ಮ ದಿನನಿತ್ಯದ ವ್ಯವಹಾರಗಳನ್ನು ಮೂಗು ಮುಚ್ಚಿಕೊಂಡು ಮಾಡುವಂತ ಪರಿಸ್ಥಿತಿ ಉಂಟಾಗಿದೆ.
ಚರಂಡಿ ದುರಸ್ತಿಗೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರ ಆಗ್ರಹ
ಕೊಳಚೆ ನೀರು ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ಪಾದಚಾರಿಗಳಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೊಳಚೆ ನೀರಿನ ವಾಸನೆಯಿಂದಾಗಿ ಅಂಗಡಿ ಮಾಲೀಕರಿಗೂ ಸಹ ಮೂಗು ಮುಚ್ಚಿಕೊಂಡು ವ್ಯವಹಾರ ಮಾಡುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೂಡಲೇ ಗ್ರಾಮಾಡಳಿತ ಚರಂಡಿ ದುರಿಸ್ತಿಗೊಳಿಸಬೇಕು ಎಂದು ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಣ್ಮುಚ್ಚಿ ಕುಳಿತ ಗ್ರಾಮಾಡಳಿತ
ಕಳೆದು ಒಂದೆರಡು ತಿಂಗಳಿಗಳಿಂದ ಕೊಳೆಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಗ್ರಾಮಾಡಳಿತ ಮಾತ್ರ ಇದಕ್ಕೂ ನನಗೂ ಸಂಬಂಧವಿಲ್ಲ ಎಂಬಂತೆ ಕುಳಿತಿದೆ. ಈ ವಿಷಯವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ, ಕಳೆದ ಒಂದು ತಿಂಗಳ ಹಿಂದೆ ಎಸ್ಟಿಮೇಟ್ ಅನುಮೋದನೆಗೆ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದು, ಅನುಮೋದನೆ ಆದ ತಕ್ಷಣ ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.
ಪಂಚಾಯಿತಿ ಆಡಳಿತ ಅಧಿಕಾರಿ ಶಿವಪ್ರಕಾಶ್ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಮಾತನಾಡಿ ನಿಯಮಾನುಸಾರ ಕೆಲಸ ಹೇಗೆ ನಿರ್ವಹಿಸಬೇಕು ಆ ಮಾದರಿಯಲ್ಲಿ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ಇನ್ನಾದರೂ ಗ್ರಾಮಾಡಳಿತ ಎಚ್ಚೆತ್ತುಕೊಂಡು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ಅಂಗಡಿ ಮಾಲೀಕರ ವ್ಯವಹಾರದ ದೃಷ್ಟಿಯಿಂದ ಚರಂಡಿ ದುರಸ್ತಿ ಆಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.
ಸುರೇಶ್, ರಾಜು, ಮಂಜುನಾಥ್, ಉಮೇಶ್, ಕುಮಾರ ಸೇರಿದಂತೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿ ಚರಂಡಿ ದುರಸ್ತಿಗೆ ಆಗ್ರಹಿಸಿದ್ದಾರೆ.





