ಸಾಗರ : ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನ್ಯ ಪದವೀಧರರಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯ ಕೃಷಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ.
ಅವರು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಆನಂದಪುರದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಉಪತಹಶೀಲ್ದಾರ್ ಶಾಂತಮೂರ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಸಾಮಾನ್ಯ ಆಡಳಿತಾತ್ಮಕ ಹುದ್ದೆಗಳಲ್ಲ. ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ರೈತರಿಗೆ ವೈಜ್ಞಾನಿಕ ಕೃಷಿ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ರಸಗೊಬ್ಬರ, ಬೀಜ ಕೀಟನಾಶಗಳ ಮೇಲ್ವಿಚಾರಣೆ, ಕೃಷಿ ವಿಸ್ತರಣಾ ಸೇವೆಗಳು ಹಾಗೂ ವಿವಿಧ ಕೃಷಿ ಕಾಯ್ದೆಗಳ ಅನುಷ್ಠಾನದಂತ ಅತ್ಯಂತ ಜವಾಬ್ದಾರಿ ಕರ್ತವ್ಯಗಳನ್ನ ನಿರ್ವಹಿಸುತ್ತಾರೆ. ಆದ್ದರಿಂದ ಇಂತಹ ತಾಂತ್ರಿಕ ಹುದ್ದೆಗಳಿಗೆ ಸೂಕ್ತ ಕೃಷಿ ಶಿಕ್ಷಣ, ಕ್ಷೇತ್ರ ಮಟ್ಟದ ತರಬೇತಿ ಹಾಗೂ ಕಾನೂನು ಬದ್ಧ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಆದರೆ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯ cadre and recruitment rules ಹಾಗೂ ಜಾರಿಯಲ್ಲಿರುವ ನಿಯಮಗಳ ಆಶಯಕ್ಕೆ ವಿರುದ್ಧವಾಗಿ ಕೆಲವು ಅರ್ಹತೆಗಳನ್ನು ಸೇರಿಸಿರುವುದು ಸಾವಿರಾರು ಕೃಷಿ ವಿದ್ಯಾರ್ಥಿಗಳ ನ್ಯಾಯಸಮ್ಮತ ಹಕ್ಕುಗಳಿಗೆ ದಕ್ಕೆ ಉಂಟು ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ತಿಂಗಳುಗಳಿಂದ ಕೃಷಿ ಅಧಿಕಾರಿ ನೇಮಕಾತಿಯಲ್ಲಿನ ಗಂಭೀರ ಲೋಪಗಳು, ಅರ್ಹತಾ ನಿಯಮಗಳಲ್ಲಿನ ವ್ಯತ್ಯಾಸಗಳು, ಕೃಷಿ ಶಿಕ್ಷಣಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಸಂಬಂಧ ಪಟ್ಟ ಇಲಾಖೆಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನಗಳಾಗಿಲ್ಲ. ಸಾವಿರಾರು ಕೃಷಿ ವಿದ್ಯಾರ್ಥಿಗಳು ಹಾಗೂ ಪದವೀದರರ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ವಿಷಯವನ್ನು ಸರ್ಕಾರ ನಿರ್ಲಕ್ಷಿಸಿರುವುದು ಅತ್ಯಂತ ನೋವುಂಟು ಮಾಡುವ ಸಂಗತಿ ಆಗಿದೆ ಎಂದು ಅಳಲು ತೋಡಿಕೊಂಡರು.
ಕೃಷಿ ವಿದ್ಯಾರ್ಥಿಗಳ ಬೇಡಿಕೆಗಳು
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು. ಸರ್ಕಾರದ ನೇಮಕಾತಿ ನಿಯಮ ಹಾಗೂ ಜಾರಿಯಲ್ಲಿರುವ ಕಾನೂನುಗಳ ಆಶಯಕ್ಕೆ ವಿರುದ್ಧವಾಗಿ ಹಾಗೂ ದುರುಪಯೋಗದ ಮೂಲಕ ರಾಯ್ ಟೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ B.E ಬಯೋಟೆಕ್ನಾಲಜಿ ವಿದ್ಯಾರ್ಥಿಗಳನ್ನು ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಹರೆಂದು ಪರಿಗಣಿಸಿರುವ ಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಕೃಷಿ ಇಲಾಖೆ ಎಲ್ಲಾ ತಾಂತ್ರಿಕ ಹುದ್ದೆಗಳಿಗೆ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಹಾಗೂ ಕೃಷಿ ಸಂಬಂಧಿತ ಪದವಿಗಳಿಗೆ ಮಾತ್ರ ಅರ್ಹತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದೆ ಇಟ್ಟಿದ್ದಾರೆ.
ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ: ದಿನೇಶ್ ಶಿರವಾಳ..!!
ವಿದ್ಯಾರ್ಥಿಗಳ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, “ರಾಜ್ಯಾದ್ಯಂತ ಕೃಷಿ ವಿದ್ಯಾರ್ಥಿಗಳಿಗೆ ನೇಮಕಾತಿ ವಿಚಾರದಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ಇದರಿಂದಾಗಿ ನೈಜವಾಗಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಬೀದಿಗೆ ಇಳಿಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಏನು ಮಾಡಲು ಹೊರಟಿದೆ ಎಂಬುದು ತಿಳಿಯುತ್ತಿಲ್ಲ. ಅರ್ಹತೆ ಇರುವ ಕೃಷಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿರುವುದು ತೀವ್ರ ವಿಷಾದನೀಯ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರದ ಇಂತಹ ಕೆಲವೊಂದು ನಿರ್ಧಾರಗಳಿಂದ ನೈಜ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ. ಕರ್ನಾಟಕ ರಾಜ್ಯ ರೈತ ಸಂಘವು ವಿದ್ಯಾರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ. ಮುಂಬರುವ ದಿನಗಳಲ್ಲಿ ಈ ಹೋರಾಟವನ್ನು ಇನ್ನಷ್ಟು ಉಗ್ರರೂಪಕ್ಕೆ ಕೊಂಡೊಯ್ದು, ನಿದ್ರಿಸುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ನಾವು ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅನಂದಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರವೀಣ್ , ಕಂದಾಯ ಇಲಾಖೆ ಅಧಿಕಾರಿ ಕವಿರಾಜ್, ರೈತ ಸಂಘಟನೆಯ ನಾಯಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಯ ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ





