ಸಾಗರ : ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈಡಿಗರ ಸಂಘಗಳಿದ್ದು, ಅಭಿವೃದ್ಧಿಗೆ ಕಾಗೋಡು ತಿಮ್ಮಪ್ಪ ಹರತಾಳು ಹಾಲಪ್ಪ ಅಣ್ಣಾಜಿ, ರಾಮಪ್ಪನವರಂತ ಕೊಡುಗೆ ಅಪಾರವಾದದ್ದು, ಆದರೆ ಅವರು ಎಂದಿಗೂ ಸಂಘವನ್ನ ರಾಜಕಾರಣಕ್ಕೆ ಎಳೆದು ತಂದಿರಲಿಲ್ಲ. ಆದರೆ ಪ್ರಸ್ತುತ ಶಾಸಕರು ಸಚಿವ ಸ್ಥಾನಕ್ಕಾಗಿ ಸಂಘವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಆರೋಪ ಮಾಡಿದ್ದಾರೆ.
ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಚಿವ ಸ್ಥಾನಕ್ಕಾಗಿ ಸಾಗರ ಈಡಿಗ ಸಂಘದ ಅಧ್ಯಕ್ಷ ಮರಸದ ಮಂಜಪ್ಪ ಅವರು, ಸಮಾಜದ ಪ್ರಮುಖರು ಆಗಿರುವ ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರನ್ನು ಅಭಿನಂದಿಸಲು ತೆರಳುವ ವೇಳೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ, ಮನವಿ ಸಲ್ಲಿಸಲು ಒತ್ತಾಯಿಸಲಾಗಿತ್ತು. ಆದರೆ ಒಬ್ಬ ಶಾಸಕರ ಪರವಾಗಿ ನಾವು ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ ಅಧ್ಯಕ್ಷರನ್ನ ಕೆಳಗಿಳಿಸುವ ಹುನ್ನಾರ ಆರಂಭವಾಗಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ನಾನು ಮಧು ಬಂಗಾರಪ್ಪ ಹಾಗೂ ಭೀಮಣ್ಣ ಅವರನ್ನು ಓಲೈಸುವ ರಾಜಕಾರಣ ಮಾಡಿಲ್ಲ. ಅದು ನನಗೆ ಅವಶ್ಯಕತೆಯೂ ಇಲ್ಲ. ಜನ ನನ್ನನ್ನು ರಾಜಕಾರಣಕ್ಕೆ ತಂದಿದ್ದು ಅವರ ಸೇವೆ ಮಾಡಲು. ನಾನು ಯಾವುದೇ ಬ್ಲಾಕ್ ಮೇಲ್ ದಂಧೆ , ಮರಳು ಮಾಫಿಯಾ, ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಕೃಷಿಯ ಮೂಲಕ ಆದಾಯವನ್ನು ಗಳಿಸಿ ಜನರ ಸೇವೆ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ಕೃಷಿ ಚಟುವಟಿಕೆಗಳನ್ನು ಶಾಸಕರು ಹಾಗೂ ಅವರ ಆಪ್ತರು ಬಂದು ನೋಡಬಹುದು ಎಂದು ಸವಾಲು ಹಾಕಿದರು.
ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಹಾಲಪ್ಪ ಅವರನ್ನು ಓಲೈಸಿ ಯಾರಿಗೆ ಮತ ಹಾಕಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ರಾಜಕಾರಣವನ್ನು ನಾನು ಮಾಡುತ್ತಿಲ್ಲ. ಅಂಥವರಿಂದ ಶಾಸಕರು ಹೇಳಿಕೆ ನೀಡಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದರು.
ಧನರಾಜ್ ಬೈರಾಪುರ ಮಾತನಾಡಿ, ಶಾಸಕರು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಘದಲ್ಲಿ ಎಲ್ಲಾ ಪಕ್ಷದಲ್ಲಿ ಗುರುತಿಸಿಕೊಂಡವರು ಇದ್ದಾರೆ. ಹೀಗಿರುವಾಗ ಪತ್ರ ಮುಖೇನಾ ಸಚಿವ ಸ್ಥಾನ ನೀಡಿ ಎಂದು ಹೇಳುವುದು ತಪ್ಪಾಗುತ್ತದೆ. ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಅಧ್ಯಕ್ಷರನ್ನ ಕೆಳಗಿಳಿಸುವ ಹುನ್ನಾರ ನಡೆಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಣ್ಯಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸಮಾಜಕ್ಕೆ ವಿವಿಧ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಸಂಘವನ್ನು ಕಟ್ಟಿಕೊಳ್ಳಲಾಗುತ್ತದೆ. ಆದರೆ ಇಂದು ರಾಜಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ್ ಗೌತಮಪುರ, ಚಂದ್ರು ಐಗಿನಬೈಲು, ಮಂಜಪ್ಪ, ಮೋಹನ್ ಕುಮಾರ್, ಪರಮೇಶ್ ಕಣ್ಣೂರ್ ಇನ್ನಿತರರು ಉಪಸ್ಥಿತರಿದ್ದರು.





