ಸಾಗರ : ಇಂದು ಕೃಷಿ ಕ್ಷೇತ್ರ ಬಹಳ ಸಂಕಷ್ಟದಲ್ಲಿದ್ದು, ವಿಜ್ಞಾನಿಗಳು ಪ್ರಚುರಪಡಿಸಿದ ನವೀನ ಮಾದರಿಯ ತಂತ್ರಜ್ಞಾನಗಳು ರೈತರನ್ನು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ರೈತರ ಶ್ರೇಯೋಭಿವೃದ್ಧಿಯಾಗಿ ಹೋಬಳಿ ಮಟ್ಟದಲ್ಲಿ ಇನ್ನು ಆರು ತಿಂಗಳಲ್ಲಿ ಸಹ್ಯಾದ್ರಿ ಕೃಷಿ ಓನ್ ಮಾದರಿಯ ಘಟಕವನ್ನ ಸ್ಥಾಪನೆ ಮಾಡಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಎಂ ವಿ ಧನಂಜಯ್ ಭರವಸೆ ನೀಡಿದರು.
ಅವರು ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಕೃಷಿ ತಂತ್ರಜ್ಞಾನ ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ 50 ಕೋಟಿ ಯೋಜನೆಯಲ್ಲಿ ಸಹ್ಯಾದ್ರಿ ಕೃಷಿ ಓನ್ ಮಾದರಿ ಘಟಕವನ್ನು ಸ್ಥಾಪನೆ ಮಾಡಲಾಗುವುದು. ರೈತರು ಅಲೆದಾಡುವ ಪರಿಸ್ಥಿತಿ ಉಂಟಾಗಬಾರದು. ನಾವು ರೈತರ ಮನೆ ಬಾಗಿಲಿಗೆ ಹೋಗಬೇಕು ಎನ್ನುವ ಆಶಯ ಹೊಂದಿದ್ದೇನೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡವರಿಗೆ ವಿಶೇಷ ಯೋಜನೆ
ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕಾಗಿದೆ. ರೈತರನ್ನು ಗಣನೆಗೆ ತೆಗೆದುಕೊಂಡು ಅವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಯೋಜನೆಯನ್ನು ರೂಪಿಸಿದಾಗ ಮಾತ್ರ ವಿಶ್ವವಿದ್ಯಾಲಯದ ಬಗ್ಗೆ ರೈತರಲ್ಲಿ ಉತ್ತಮ ಅಭಿಪ್ರಾಯ ಮೂಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲಾಗುವುದೆಂದು ಭರವಸೆ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸಲು ವಿಶೇಷ ಯೋಜನೆ
ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಬಲಿಷ್ಠರಾಗುವುದು ಅಸಾಧ್ಯವಾಗಿದೆ. ಆದ್ದರಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.
ರೈತರ ಬೆಳೆಗಳನ್ನು ಬೆಳೆದು ಮಾರಾಟ ಮಾಡುವುದು ಮಾತ್ರವಲ್ಲದೆ ಅವುಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲು ನನ್ನದೇ ಹಲವಾರು ಯೋಜನೆಗಳು ಇದ್ದು, ಅವುಗಳನ್ನು ಕಾರ್ಯಕರ್ತಗೊಳಿಸಲಾಗುವುದು. ತರಬೇತಿ, ಕ್ಷೇತ್ರೋತ್ಸವ, ಕೃಷಿ ಮೇಳಗಳ ಮೂಲಕವೂ ಸಹ ಹೆಚ್ಚಿನ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಅಧಿಕಾರಿಗಳು ನಿರಂತರ ರೈತರ ಸಂಪರ್ಕದಲ್ಲಿರಬೇಕು
ವಿಶ್ವವಿದ್ಯಾಲಯದ ಪ್ರತಿಯೊಬ್ಬ ಅಧಿಕಾರಿಯೂ ನಿರಂತರವಾಗಿ ಕನಿಷ್ಠ 1000 ರೈತರ ಸಂಪರ್ಕವನ್ನು ಹೊಂದುವ ಮೂಲಕ 5 ರಿಂದ 6 ಲಕ್ಷ ರೈತರಿಗೆ ಉಪಯುಕ್ತ ಮಾಹಿತಿ ಹಾಗೂ ನವೀನ ಮಾದರಿಯ ತಂತ್ರಜ್ಞಾನಗಳನ್ನ ತಲುಪಿಸುವ ಹೊಸ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ





