ಸಾಗರ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ವೈಫಲ್ಯದಿಂದಾಗಿ ಅರಣ್ಯ ಅಧಿಕಾರಿಗಳು ರೈತರಿಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ ಇತ್ತೀಚೆಗೆ ಅರಣ್ಯ ಅಧಿಕಾರಿಗಳಿಂದ ಕೇವಲ 15 ಗುಂಟೆ ಜಮೀನು ತೆರವು ಗೊಳಿಸಿದ ಸ್ಥಳವನ್ನು ಪರಿಶೀಲಸಿ ಮಾತನಾಡಿದರು.
ಜಿಲ್ಲೆಯ ಅಧಿಕಾರಿಗಳ ಮೇಲೆ ಉಸ್ತುವಾರಿ ಸಚಿವರ ಹಿಡಿತವಿಲ್ಲ
ತಾಲೂಕ ಆಡಳಿತ ಹಾಗು ಜಿಲ್ಲಾಡಳಿತ ಸಂಪೂರ್ಣ ವೀಕ್ ಆಗಿದೆ. ಶಾಸಕರು ಹಾಗೂ ಉಸ್ತುವಾರಿ ಸಚಿವರ ವೈಫಲ್ಯದಿಂದಾಗಿ ಈ ರೀತಿ ಪ್ರಕರಣಗಳು ನಡೆಯುತ್ತಿವೆ. ಜಿಲ್ಲೆಯ ಅಧಿಕಾರಿಗಳ ಮೇಲೆ ಉಸ್ತುವಾರಿ ಸಚಿವರಿಗೆ ಹಿಡಿತವಿಲ್ಲ. ಬಿಜೆಪಿ ಅಧಿಕಾರ ಅವಧಿಯಲ್ಲಿ ಇಂತಹ ಒಂದು ಘಟನೆ ಸಹ ನಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಗರ ತಾಲೂಕಿನಲ್ಲಿ ಈಗಾಗಲೇ ಹತ್ತಾರು ಘಟನೆಗಳು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಗೆ ಮನುಷ್ಯತ್ವ ಇದ್ದರೆ ಸ್ಥಳ ಪರಿಶೀಲನೆ ಮಾಡಲಿ
ಮನುಷ್ಯತ್ವ ಇರುವ ಶಾಸಕರು ಹಾಗೂ ತಾಲೂಕು ಆಡಳಿತ ಸ್ಥಳ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. 30 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಯಾರೂ ರಾಜಕೀಯ ಪುಡಾರಿ ಹೇಳಿದ ಮಾತು ಕೇಳಿ ಅದನ್ನು ತೆರವುಗೊಳಿಸುವುದು ಅಕ್ಷಮ್ಯ ಅಪರಾಧ ಎಂದು ಘಟನೆಯನ್ನು ಖಂಡಿಸಿದರು.
ರೈತರ ಮೇಲೆ ಅಧಿಕಾರಿಗಳ ದೌರ್ಜನ್ಯವನ್ನು ಮುಂದುವರಿಸಲು ಬಿಡುವುದಿಲ್ಲ
ನಿರಂತರವಾಗಿ ಅರಣ್ಯ ಅಧಿಕಾರಿಗಳಿಂದ ರೈತರಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಕೆಳಹಂತದ ಅಧಿಕಾರಿಗಳಿಂದ ಒತ್ತುವರಿ ತೆರವು ಕೆಲಸ ನಡೆಯುತ್ತಿದೆ. ಆದರೆ ಡಿಎಫ್ಓ ಗಮನಕ್ಕೆ ಬಂದ ನಂತರ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ರೈತರ ಮೇಲೆ ಹೀಗೆ ದೌರ್ಜನ್ಯ ನಡೆದರೆ ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು, ದಿಶಾ ಸಮಿತಿಯ ಸದಸ್ಯ ಮಲ್ಲಿಕಾರ್ಜುನ್ ಹಕ್ರೆ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ, ಪ್ರಮುಖರಾದ ದೇವೇಂದ್ರಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.





