ಸಾಗರ : ತಾಲ್ಲೂಕಿನ ಆನಂದಪುರ ಸಮೀಪದ ಆಚಾಪುರ ಬಳಿ ಇರುವ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಅಕ್ರಮ ಮರಳು ದಾಸ್ತಾನು ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಲೋಕಾಯುಕ್ತ ಇನ್ಸ್ ಪೆಕ್ಟರ್ ಸೂಚನೆ ಮೇರೆಗೆ ಹಿರಿಯ ಭೂ ವಿಜ್ಞಾನಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಚಾಪುರ ಬಳಿ ಇರುವ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.
ಮರಳಿಗೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯ ಶಿಕ್ಷಕರನ್ನು ವಿಚಾರಿಸಿದಾಗ ಯಾವುದೇ ಅಧಿಕೃತ ಪರವಾನಿಗೆಗಳನ್ನು ಹಾಜರುಪಡಿಸಿಲ್ಲ. ಜೊತೆಗೆ ಸಂಬಂಧಪಟ್ಟ ಇಲಾಖೆಯ ತಂತ್ರಾಂಶದಲ್ಲೂ ಸಹ ಆಚಾಪುರ ಸ್ಥಳಕ್ಕೆ ಸಂಬಂಧಪಟ್ಟಂತೆ ಯಾವುದೇ ಪರವಾನಿಗೆಗಳು ಸಹ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ 264 ಮೆಟ್ರಿಕ್ ಟನ್ ಮರಳನ್ನು ಯಾವುದೇ ಪರವಾನಿಗೆಲ್ಲದೆ ಅಕ್ರಮ ಸಾಗಾಣಿಕೆ ಮಾಡಿ ದಾಸ್ತಾನು ಮಾಡಿಕೊಂಡ ಹಿನ್ನೆಲೆಯಲ್ಲಿ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಜ್ಯೋತಿ ಕೆ.ಕೆ ಅವರು ದೂರು ನೀಡಿದ್ದಾರೆ.





