ಸಾಗರ : ತಾಲೂಕಿನ ಆನಂದಪುರ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಾಗರ ತಾಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಿರುವುದನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಖಂಡಿಸಿದ್ದಾರೆ.
ಆನಂದಪುರ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಣಿಶ್ರೀ ಅವರು ಉತ್ತಮವಾಗಿ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೆ ಮಲಂದೂರು ಗ್ರಾಮದಲ್ಲಿ ಸುಮಾರು 11 ಎಕರೆ ಜಾಗ(15 ರಿಂದ 20 ಕೋಟಿ ಬೆಲೆಬಾಳುವ) ಭೂ ಮಾಫಿಯಾದವರ ಪಾಲಾಗುತ್ತಿರುವುದನ್ನು ತಪ್ಪಿಸಿ ರಕ್ಷಣೆ ಮಾಡಿದ್ದಾರೆ. ಇದರಿಂದ ಆನಂದಪುರ ಸುತ್ತಮುತ್ತ ಇರುವ ಅನೇಕ ವಸತಿ ಇಲ್ಲದವರಿಗೆ ಹಂಚಿಕೆ ಮಾಡಲು ಈ ಜಾಗ ಸೂಕ್ತವಾಗಿದೆ. ಇಂತಹ ಬೆಲೆಬಾಳುವ ಜಾಗವನ್ನು ರಕ್ಷಣೆ ಮಾಡಿದ ಪಂಚಾಯಿತಿ ಅಭಿವೃದ್ಧಿಗೆ ವರ್ಗಾವಣೆಯ ಶಿಕ್ಷೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಲಂದೂರು ಗ್ರಾಮದಲ್ಲಿ ರಾತ್ರೋರಾತ್ರಿ ಭೂ ಮಾಫಿಯಾದವರು ಜಾಗವನ್ನು ಕಬಳಿಸಲು ಸ್ವಚ್ಛತೆ ಮಾಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಮಾಜಿ ಜನ ಪ್ರತಿನಿಧಿಗಳು ಹೋರಾಟ ಮಾಡಿ ಜಾಗ ಭೂಮಾಫಿಯದವರ ಪಾಲಾಗುವುದನ್ನು ತಪ್ಪಿಸಿದ್ದಾರೆ. ಈ ಸ್ಥಳಕ್ಕೆ ಇಒ ಆಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಯಾವ ಒತ್ತಡಕ್ಕೂ ಮಣಿಯದೆ, ಯಾರ ಮಾತನ್ನು ಕೇಳದೆ ಜಾಗದ ರಕ್ಷಣೆಗೆ ನಿಂತ ಹಿನ್ನೆಲೆಯಲ್ಲಿ ಅವರನ್ನು ತಾಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪ ಮಾಡಿದರು.
ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದ ಪಿಡಿಒ ಅವರನ್ನು ವರ್ಗಾವಣೆ ಮಾಡಿರುವುದರ ಹಿಂದೆ ಮೇಲಾಧಿಕಾರಿಗಳು ಭೂ ಮಾಫಿಯಾ ದವರ ಜೊತೆಗೆ ಶಾಮಿಲ್ ಆಗಿದ್ದಾರೆ. ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ವರ್ಗಾವಣೆ ಮಾಡಲಾಗಿದೆ. ಅಂತಹ ಬೆಲೆಬಾಳುವ ಜಾಗವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳಿಗೆ ಇಲ್ವಾ ಎಂದು ಕಿಡಿ ಕಾರಿದರು.
ಗ್ರಾಮ , ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಪ್ರಸ್ತುತ ಇಲ್ಲ. ಇರುವ ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರಿಗೆ ಹೋಗಿ ಮೂರು ತಿಂಗಳು ಕಳೆದಿದೆ. ಅವರ ಮೂಲಕ ಲಾಭಕ್ಕಾಗಿ ಅವರ ಬೆಂಬಲಿಗರು ಇಲ್ಲಿ ಅಧಿಕಾರ ಚಲಾಯಿಸುತ್ತಿರುವುದು ಸರಿಯಲ್ಲ.
ಕೂಡಲೇ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಧಿಕಾರಿಗಳು ಸ್ಥಳಕ್ಕೆ ಬಂದು ಕಬಳಿಸಲು ಯತ್ನಿಸಿರುವ ಜಾಗಕ್ಕೆ ಸೂಕ್ತ ಗಡಿ ಗುರುತಿಸಿ ರಕ್ಷಣೆ ಮಾಡಬೇಕು. ಇಲ್ಲವೇ ಇನ್ನೊಂದೆರಡು ದಿನದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಆನಂದಪುರದಲ್ಲಿ ನಿವೇಶನ ರಹಿತರು ಬಹಳಷ್ಟು ಜನ ಇದ್ದು, ಅವರ ಅನುಕೂಲಕ್ಕಾಗಿ ಮಲಂದೂರುದಲ್ಲಿರುವ ಗ್ರಾಮ ಠಾಣಾ ಜಾಗವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಕಬಳಿಕೆಯ ಯತ್ನ ನಡೆದರೆ ಹೋರಾಟವು ಮಾಡಬೇಕಾಗುತ್ತದೆ. ತಾಲೂಕು ಹಾಗೂ ಜಿಲ್ಲಾ ಕಾರ್ಯನಿರ್ವಾಹಣಾ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಭೂ ಕಬಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ತಹಶೀಲ್ದಾರ್ ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ನವೀನಾ ರವೀಂದ್ರ, ಮ್ಯಾಮ್ ಕೋಸ್ ನಿರ್ದೇಶಕರಾದ ಭರ್ಮಪ್ಪ, ದಲಿತ ಸಂಘಟನೆಯ ಸಂಚಾಲಕರ ರೇವಪ್ಪ ಹೊಸಕೊಪ್ಪ, ಪ್ರಮುಖರಾದ ಚೌಡಪ್ಪ, ಮಂಜುನಾಥ್, ಮೋಹನ್ ಉಪಸ್ಥಿತರಿದ್ದರು
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ





