ಸಾಗರ : ಮೀನು ಕೃಷಿಯನ್ನು ವೈಜ್ಞಾನಿಕ ವಿಧಾನದಲ್ಲಿ ಕೈಗೊಂಡರೆ ಮಾತ್ರ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವೆಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಶಾಮರಾವ ಜಾಗೀರದಾರ್ ಹೇಳಿದರು.
ಅವರು ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ನಡೆದ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೀನು ಸಾಕಾಣಿಕೆಯಿಂದ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳ ಜೊತೆಗೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ರೈತರು ಹಾಗೂ ಆಸಕ್ತರು ವಿಶ್ವವಿದ್ಯಾಲಯದ ತಜ್ಞರ ಮಾರ್ಗದರ್ಶನ ಪಡೆದು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕು ಎಂದು ಕರೆ ನೀಡಿದರು.
ಮೀನು ಕೃಷಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ತರುವ ಲಾಭದಾಯಕ ಕೃಷಿ ಚಟುವಟಿಕೆಯಾಗಿದೆ. ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕೆನ್ನುವ ಉದ್ದೇಶದಿಂದ ವಿಶ್ವವಿದ್ಯಾಲಯವು ಕಾಲಕಾಲಕ್ಕೆ ಇಂತಹ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಆಧುನಿಕ ಕೃಷಿ ಹಾಗೂ ಮೀನುಗಾರಿಕೆ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮೀನುಗಾರ ಸಂಘದ ಅಧ್ಯಕ್ಷ ಡಾಕ್ಟರ್ ದೇವಿ ಪ್ರಸಾದ್ ಮಾತನಾಡಿ, ಮೀನು ಕೃಷಿ ಇಂದಿನ ದಿನಗಳಲ್ಲಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಉತ್ತಮ ಆದಾಯ ತರುವ ಉದ್ಯಮವಾಗಿ ಬೆಳೆಯುತ್ತಿದೆ. ವೈಜ್ಞಾನಿಕ ಮೀನು ಸಾಕಾಣಿಕೆ ವಿಧಾನಗಳು, ಗುಣಮಟ್ಟದ ಮೀನು ಮರಿಗಳ ಆಯ್ಕೆ, ಸಮರ್ಪಕ ಆಹಾರ ನಿರ್ವಹಣೆ ಹಾಗೂ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಉತ್ಪಾದನೆ ಹಾಗೂ ಹೆಚ್ಚಿನ ಲಾಭಗಳಿಸಬಹುದಾಗಿದೆ. ಇಂತಹ ತರಬೇತಿ ಕಾರ್ಯಕ್ರಮಗಳು ಮೀನು ಕೃಷಿಕರಲ್ಲಿ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವಿಸ್ತರಣಾ ನಿರ್ದೇಶಕರದ ಡಾ. ರಾಘವೇಂದ್ರ ಕೆ. ಮೇಸ್ತ, ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಡಿ ರವಿಕುಮಾರ್, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ, ಸಹಾಯಕ ಪ್ರಾಧ್ಯಾಪಕ ಶಾಂತನಗೌಡ, ಸಹಾಯಕ ನಿರ್ದೇಶಕ ರಾಘವೇಂದ್ರ, ಪ್ರಮುಖರಾದ ಕೃಷ್ಣಾರೆಡ್ಡಿ, ಬಿ.ಸಿ ಹನುಮಂತ ಸ್ವಾಮಿ ಸೇರಿದಂತೆ ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





