ಶಿವಮೊಗ್ಗ : ಅಯೋಧ್ಯೆಯಲ್ಲಿ ಕೋಟ್ಯಾಂತರ ಶ್ರೀರಾಮ ಭಕ್ತರ ಆಸೆಯಂತೆ ಶ್ರೀ ರಾಮನ ಭವ್ಯ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಇದು ಈಗ ಪ್ರಪಂಚದಾದ್ಯಂತ ಜನರ ಪ್ರೇಕ್ಷಣೀಯ ಸ್ಥಳವಾಗಿದೆ. ಪ್ರತಿ ದಿನ ಲಕ್ಷಾಂತರ ಜನರು ಶ್ರೀ ರಾಮನ ದರ್ಶನ ಪಡೆಯುತ್ತಿದ್ದಾರೆ.
ಆದರೆ ಅಯೋಧ್ಯೆಗೆ ತೆರಳಿ ಶ್ರೀ ರಾಮನ ದರ್ಶನ ಪಡೆಯಲು ಆಗದವರು ಇನ್ನು ಕೋಟ್ಯಾಂತರ ಭಕ್ತರು ಸಹ ಇದ್ದಾರೆ. ಅದಕ್ಕೆ ಆರ್ಥಿಕ ಹಾಗೂ ಪ್ರಯಾಣದ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಇದನ್ನು ಅರಿತ ತುಮಕೂರು ಜಿಲ್ಲೆ ತಿಪಟೂರಿನ ವಿನಯ್ ರಾಮ್ ಅವರು ಅಯೋಧ್ಯ ಶ್ರೀರಾಮ ಮಂದಿರದ ಪ್ರತಿಕೃತಿ ರಚನೆ ಮಾಡಿ ಅದನ್ನು ಸಣ್ಣ ಸಣ್ಣ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರದರ್ಶನ ಮಾಡುತ್ತಾ ಬರುತ್ತಿದ್ದಾರೆ.
ಈ ಬಾರಿ ಶ್ರೀರಾಮನ ದರ್ಶನ ಪಡೆಯುವ ಅದೃಷ್ಟ ಶಿವಮೊಗ್ಗ ಜಿಲ್ಲೆಗೆ ಬಂದು ಒದಗಿದೆ. ಭದ್ರಾವತಿಯ ಆರ್ಯ ವೈಶ್ಯ ಸಭಾಭವನದಲ್ಲಿ ಜುಲೈ 9 ರಿಂದ ಪ್ರದರ್ಶನಕ್ಕೆ ಇಟ್ಟಿದ್ದು, ಒಟ್ಟು 9 ದಿನ ಪ್ರದರ್ಶನ ನಡೆಯಲಿದೆ. ಇಲ್ಲಿನ ಶ್ರೀರಾಮ ಮಂದಿರವನ್ನು ಪ್ರತಿದಿನ ನೂರಾರು ಭಕ್ತರು ಬಂದು ದರ್ಶನ ಪಡೆಯುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. 15 ಅಡಿ ಅಗಲ, 15 ಅಡಿ ಉದ್ದ ಹಾಗೂ 10 ಅಡಿ ಎತ್ತರದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ಒಂದು ಕಡೆಯಿಂದ ಮತ್ತೊಂದು ಕಡೆಗೆ ತಂದು ನಿರ್ಮಿಸಲು ಮೂರು ದಿನ, ಬಿಚ್ಚಲು ಮೂರು ದಿನ ಬೇಕು. ವಿನಯ್ ರಾಮ್ ಅವರು ಇದನ್ನು ಕಳೆದ ನಾಲ್ಕು ವರ್ಷಗಳಿಂದ ಸೇವೆ ಎಂಬಂತೆ ಮಾಡಿಕೊಂಡು ಬಂದಿದ್ದಾರೆ. ಶ್ರೀ ರಾಮನ ಸೇವೆ ಮಾಡುವ ಉದ್ದೇಶದಿಂದ ತಮ್ಮ ಶಿಕ್ಷಕರು ವೃತ್ತಿಗೆ ರಾಜೀನಾಮೆ ನೀಡಿ ಶ್ರೀರಾಮ ಮಂದಿರದ ಸೇವೆಯನ್ನು ತಮ್ಮ ಕಾರ್ಯವನ್ನಾಗಿ ಮಾಡಿಕೊಂಡು ಬಂದಿದ್ದಾರೆ.
ಈ ವಿಷಯವಾಗಿ ಮಾತನಾಡಿದ ವಿನಯ್ ರಾಮ್ ಅವರು, 2022 ರಿಂದ ಇದನ್ನು 108 ಕಡೆ ಪ್ರದರ್ಶನ ಮಾಡಲಾಗಿದೆ. ಈಗ ಭದ್ರಾವತಿಯ ಆರ್ಯವೈಶ್ಯ ಸಭಾಭವನದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಈ ಪ್ರದರ್ಶನದ ಉದ್ದೇಶ ವಯಸ್ಸಾದವರಿಗೆ ಅಯೋಧ್ಯಕ್ಕೆ ಹೋಗಿ ಶ್ರೀರಾಮ ಮಂದಿರ ದರ್ಶನ ಮಾಡಲು ಆಗದೆ ಇರುವವರಿಗೆ ಇಲ್ಲಿಗೆ ಬಂದು ಶ್ರೀರಾಮನ ದರ್ಶನ ಪಡೆಯಬಹುದು. ರಾಮ ಸೂರ್ಯವಂಶದವನು, ಸೂರ್ಯ ಯಾವ ರೀತಿ ಸರ್ವರಿಗೂ ಸಮಾನವಾದ ಬೆಳಕು ನೀಡುತ್ತಾನೋ, ಅದೇ ರೀತಿ ರಾಮನ ಆದರ್ಶ ಪ್ರತಿಯೊಬ್ಬರಿಗೂ ಬೇಕು. ಆದ್ದರಿಂದ ನಾವು ರಾಜ್ಯಾದ್ಯಂತ ಇದರ ಪ್ರದರ್ಶನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ





