ಸಾಗರ : ಗ್ರಾಹಕ ಸೋಗಿನಲ್ಲಿ ಬಂದಂತಹ ಕಳ್ಳನೊಬ್ಬ ಹಣವನ್ನು ಎಗರಿಸಿ ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಬಟ್ಟೆ ಅಂಗಡಿಯೊಂದಕ್ಕೆ ಬಂದಂತಹ ಕಳ್ಳ ಕರವಸ್ತ್ರವನ್ನು ಖರೀದಿ ಮಾಡಿದ ನಂತರ 500 ರೂ ಮುಖ ಬೆಲೆಯುಳ್ಳ ನೋಟನ್ನು ನೀಡಿ ಚಿಲ್ಲರೆ ಪಡೆಯುತ್ತಾನೆ. ನಂತರ ಮಾಲೀಕನಿಗೆ ಯಾಮಾರಿಸಬೇಕು ಎನ್ನುವ ಉದ್ದೇಶದಿಂದ ನಾನು ನೀಡಿದ ಸೀರಿಯಲ್ ನಂಬರ್ ನೋಟನ್ನೇ ನೀಡಬೇಕು ಎಂದು, ಕ್ಯಾಶ್ ಟೇಬಲ್ ಒಳಗೆ ಇದ್ದ ಎಲ್ಲಾ ಹಣವನ್ನು ತೆಗೆಸುತ್ತಾನೆ. ಆ ಸೀರಿಯಲ್ ನಂಬರ್ ನೋಟನ್ನು ನಾನೇ ಪರೀಕ್ಷೆ ಮಾಡುತ್ತೇನೆ ಎಂದು ಮಾಲೀಕನಿಂದ ಅಷ್ಟು ಹಣವನ್ನು ಪಡೆದ ಗ್ರಾಹಕ ಸೋಗಿನ ಕಳ್ಳ, ಮಾಲೀಕನಿಗೆ ಗೊತ್ತಾಗದಂತೆ 10,000 ಹಣವನ್ನು ಎಗರಿಸಿ ಜೇಬಿನಲ್ಲಿ ಹಾಕಿಕೊಳ್ಳುತ್ತಾನೆ. ನಂತರ ನನ್ನ ನೋಟು ನನಗೆ ಸಿಕ್ಕಿದೆ ಎಂದು ಹೇಳಿ ಅಲ್ಲಿಂದ ಪರಾರಿಯಾಗುತ್ತಾನೆ.
ಚೊರಡಿಯಲ್ಲಿ ಸಿಕ್ಕಿಬಿದ್ದ ಕಳ್ಳ
ಮತ್ತೆ ಇದೇ ಕಳ್ಳ ಚೊರಡಿಯಲ್ಲಿರುವ ಇವರ ಇನ್ನೊಂದು ಬಟ್ಟೆ ಅಂಗಡಿಯಲ್ಲೂ ಸಹ ಇದೇ ರೀತಿಯ ಕೈಚಳಕ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಕಳ್ಳನಿಂದ ಆನಂದಪುರದ ಬಟ್ಟೆ ಅಂಗಡಿಯಲ್ಲಿ ಕದ್ದ ಹಣವನ್ನು ವಸೂಲಿ ಮಾಡಿದ್ದಾರೆ.
ಅನುಮಾನಗೊಂಡ ಮಾಲೀಕ
ಆನಂದಪುರದ ಬಟ್ಟೆ ಅಂಗಡಿಯಲ್ಲಿ ಗ್ರಾಹಕ ಸೋಗಿನಲ್ಲಿ ಬಂದ ಕಳ್ಳ ಹಣವನ್ನು ಎಗರಿಸಿ ಹೋದ ನಂತರ , ಅನುಮಾನ ಗೊಂಡ ಮಾಲಿಕ ಹಣವನ್ನು ಎಣಿಸಿ ನೋಡಿದಾಗ ಕಡಿಮೆ ಇರುವುದು ಗೊತ್ತಾಗಿದೆ. ನಂತರ ಸಿಸಿಟಿವಿ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದಾಗ ಕಳ್ಳನು ಹಣವನ್ನು ಎಗರಿಸಿ ಹೋಗಿರುವುದು ತಿಳಿದಿದೆ.
ವಿಡಿಯೋವನ್ನು ಶೇರ್ ಮಾಡಿಕೊಂಡ ಮಾಲಿಕ
ಕಳ್ಳನು ಹಣವನ್ನು ಕದ್ದುಕೊಂಡು ಹೋದ ನಂತರ, ತಕ್ಷಣ ಸಿಸಿಟಿವಿ ವಿಡಿಯೋವನ್ನು ಚೊರಡಿಯಲ್ಲಿರುವ ತನ್ನ ಸಹೋದರನಿಗೆ ಶೇರ್ ಮಾಡಿರುತ್ತಾರೆ. ಕಳ್ಳನು ಕೇವಲ ಅರ್ಧ ತಾಸು ಅವಧಿಯಲ್ಲಿ ಚೊರಡಿಗೆ ಹೋಗಿ, ಅಲ್ಲಿಯೂ ತನ್ನ ಕೈಚಳಕ ಮಾಡಲು ಹೋಗುತ್ತಾನೆ. ತಕ್ಷಣ ಮಾಲಿಕ ವಿಡಿಯೋವನ್ನು ಪರಿಶೀಲಿಸಿ, ಇದೇ ಕಳ್ಳನೆ ಆನಂದಪುರದ ಬಟ್ಟೆ ಅಂಗಡಿಯಲ್ಲಿ ಕೃತ್ಯವನ್ನು ಎಸಗಿದ್ದಾನೆ ಎಂದು ಮನವರಿಕೆ ಮಾಡಿಕೊಂಡ ಮಾಲೀಕ ಅವನನ್ನು ಹಿಡಿದು, ಕದ್ದ ಹಣವನ್ನು ವಸೂಲಿ ಮಾಡುತ್ತಾರೆ. ನಂತರ ಕಳ್ಳನು ಅವರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ.
ಕಳ್ಳನ ಕೈಚಳಕದ ಸಂಪೂರ್ಣ ವಿಡಿಯೋ ಇಲ್ಲಿದೆ





