ಸಾಗರ : ಮುಕ್ತಿ ವಾಹನವನ್ನು ಆನಂದಪುರ ಹಾಗೂ ಸುತ್ತಮುತ್ತಲಿನ ಜನತೆಗೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಹೊನಗೋಡು ಕೊಡುಗೆಯಾಗಿ ನೀಡಿದ್ದಾರೆ.
ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮುಕ್ತಿ ವಾಹನಕ್ಕೆ ಚಾಲನೆ ನೀಡಿದರು.
ಮುಕ್ತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಇಂದಿನ ಸಮಾಜಕ್ಕೆ ಅವಶ್ಯಕತೆಗಳ ಬಗ್ಗೆ ರತ್ನಾಕರ್ ಹೊನಗೋಡು ಗಮನಹರಿಸಿ ಮುಕ್ತಿ ವಾಹನವನ್ನು ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಬಹಳ ವರ್ಷಗಳಿಂದಲೂ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗಾಗಿ ನೀಡುವ ಔದರ್ಯತೆ ಶ್ಲಾಘನೀಯವಾದದು. ಬಹಳ ಹಿಂದಿನಿಂದಲೂ ಸಾಮಾಜಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಮುಕ್ತಿ ವಾಹನವನ್ನು ಕೊಡುಗೆಯಾಗಿ ನೀಡಿರುವುದು ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬರೂ ಸಹ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಆಧುನಿಕ ಬದುಕಿನ ಒತ್ತಡ ಜೀವನದಲ್ಲಿ ಮುಕ್ತಿ ವಾಹನ ಸಮಾಜಕ್ಕೆ ಅವಶ್ಯಕತೆ ಇದ್ದು, ಅದನ್ನು ಮನಗಂಡು ರತ್ನಾಕರ್ ಹೊನಗೋಡು ಕೊಡುಗೆಯಾಗಿ ನೀಡಿದ್ದಾರೆ. ಸಮಾಜಕ್ಕೆ ಸದಾ ಏನನ್ನಾದರೂ ಕೊಡುಗೆ ನೀಡುಬೇಕು ಎನ್ನುವ ಮನೋಭಾವನೆ ಅವರಲ್ಲಿದೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಮೊದಲೇ ನನಗೆ ಸಿಕ್ಕಿದ್ರೆ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದವು ಎಂದು ರತ್ನಾಕರ್ ಹೊನಗೋಡು ಕಾರ್ಯವನ್ನ ಶ್ಲಾಘಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ ಆರ್ ಜಯಂತ್ ಮಾತನಾಡಿ, ನಾವು ಹುಟ್ಟನ್ನು ಹೇಗೆ ಸಂಭ್ರಮಿಸುತ್ತೇವೆಯೋ ಸಾವಿನ ಅಂತ್ಯಕ್ರಿಯೆಯನ್ನು ಸಹ ಅತ್ಯಂತ ಗೌರವುತವಾಗಿ ಕಾಣಬೇಕು. ಅಂತ್ಯಸಂಸ್ಕಾರಕ್ಕೆ ಶವವನ್ನು ಬಹಳ ದೂರ ನಡೆದುಕೊಂಡು ಹೋಗುವುದು ಅಸಾಧ್ಯವಾಗಿದೆ. ಇದನ್ನು ಮನಗೊಂಡ ರತ್ನಾಕರ್ ಹೊನಗೋಡು ಮುಕ್ತಿ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಯಾವುದೇ ಕಾರ್ಯ ಸರಾಗವಾಗಿ ನಡೆಯಬೇಕಾದರೆ ಉತ್ತಮ ನಾಯಕತ್ವ ಬೇಕು. ಆ ನಾಯಕತ್ವ ಸಾಮಾಜಿಕ ಕಳಕಳಿ ಅವರಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ್ ಹೊನಗೋಡು ಮಾತನಾಡಿ, ಬಹಳ ವರ್ಷಗಳಿಂದ ಆನಂದಪುರಕ್ಕೆ ಮುಕ್ತಿವಾಹನ ನೀಡಬೇಕು ಎನ್ನುವ ಮನೋಭಾವನೆ ಇತ್ತು ಅದು ಇಂದು ಈಡೇರಿದೆ. ಈ ವಾಹನದ ಉಸ್ತುವಾರಿಯನ್ನು ವೀರಾಂಜನೇಯ ಸ್ವಾಮಿ ಟ್ರಸ್ಟ್ ಗೆ ವಹಿಸಲಾಗಿದ್ದು, ಅವಶ್ಯಕತೆ ಇದ್ದವರು ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಅವರ ಖರ್ಚು ವೆಚ್ಚಗಳನ್ನು ಸಹ ನಾನೇ ಭರಿಸುತ್ತೇನೆ ಎಂದು ಭರವಸೆ ನೀಡಿದರು.





