ಸಾಗರ : ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2026 27 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ತಾಲೂಕಿನ ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಆರ್ ರಾಜ್ ಅವರು ಸ್ವಾಗತಿಸಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜ ನೀಡಲಾಗಿದ್ದು, ರೇಷ್ಮೆ, ಉಣ್ಣೆ, ಸೆಣಬು ಮುಂತಾದ ನೈಸರ್ಗಿಕ ನಾರುಗಳ ಸ್ವಾವಲಂಬನೆಗಾಗಿ ರಾಷ್ಟ್ರೀಯ ನಾರು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ 500 ಜಲಾಶಯಗಳು ಮತ್ತು ಅಮೃತ ಸರೋವರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ತೆಂಗಿನಕಾಯಿ ಶ್ರೀಗಂಧ ಕೋಕೋ ಮತ್ತು ಗೋಡಂಬಿಗಳ ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಯನ್ನು ಸಹ ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಬಹು ನಿರೀಕ್ಷಿತ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಸಹ ಒತ್ತು ನೀಡಲಾಗಿದೆ. ಕ್ಯಾನ್ಸರ್ ಹಾಗೂ ಶುಗರ್ ಸೇರಿದಂತೆ ಪ್ರಮುಖ ಔಷಧಿಗಳ ಬೆಲೆ ಇಳಿಕೆ ಮಾಡಲಾಗಿದೆ. ಪಶುಪಾಲನೆ ಹಾಗೂ ಮೀನುಗಾರಿಕೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.





