ಸಾಗರ : ಸಿಗಂದೂರು ಸೇತುವೆ ಉದ್ಘಾಟನೆಯಾಗಿ ದಿನಗಳು ಕಳೆಯುತ್ತಿದ್ದರೂ ಸಹ ಬಿಜೆಪಿ ಕಾಂಗ್ರೆಸ್ ನಾಯಕರು ನಡುವೆ ಆರೋಪ ಪ್ರತ್ಯಾರೋಪಗಳು ನಿರಂತರವಾಗಿ ನಡೆಯುತ್ತಿವೆ. ಈ ವಿಷಯವಾಗಿ ಸಾಗರದ ಶಾಸಕರ ವಿರುದ್ಧ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ವಾಗ್ದಾಳಿ ನಡೆಸಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರದಂತೆ ದಿಕ್ಕು ತಪ್ಪಿಸಿದ ಶಾಸಕರು
ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರದಂತೆ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ದಿಕ್ಕು ತಪ್ಪಿಸಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆಗೆ ಬಂದಂತಹ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಉದ್ಘಾಟನೆಗೆ ಹೋಗದಂತೆ ಸಾಗರದ ಶಾಸಕರು ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದರು.
ಸತೀಶ್ ಜಾರಕಿಹೊಳಿ ಅವರು ಸೇತುವೆ ಉದ್ಘಾಟನೆಯ ಕೆಲ ದಿನಗಳ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಉದ್ಘಾಟನೆಗೆ ಹೋಗುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಸೇತುವೆ ಉದ್ಘಾಟನೆಗೆ ಸಾಗರಕ್ಕೂ ಸಹ ಬಂದಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಸತೀಶ್ ಜಾರಕಿಹೊಳಿ ಉದ್ಘಾಟನೆಗೆ ಹೋಗದೆ ವಾಪಾಸ್ ಹೋಗಿದ್ದಾರೆ.
ಇದನ್ನೆಲ್ಲ ನೋಡಿದರೆ ತಾಲ್ಲೂಕಿನ ಶಾಸಕರು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕರು ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸಿ ಕಾಂಗ್ರೆಸ್ ನಾಯಕರು ಉದ್ಘಾಟನೆಗೆ ಬರದಂತೆ ನೋಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಅಭಿವೃದ್ಧಿ ಕಾರ್ಯಗಳಿಗೆ ಅಪಪ್ರಚಾರ ಅಸಹಕಾರ ತೋರಿದರೆ ಕ್ಷೇತ್ರದ ಅಭಿವೃದ್ಧಿ ಮಾಡುವುದು ಅಸಾಧ್ಯವಾಗುತ್ತದೆ. ಮೂರು ಬಾರಿ ಶಾಸಕರಾದವರು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದೆ ಇರುವುದು ಸರಿಯಲ್ಲ.
ಸೇತುವೆ ಉದ್ಘಾಟನೆ ಮೊದಲು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸೇತುವೆಯನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಶಾಸಕರು, ಸೇತುವೆ ಉದ್ಘಾಟನೆ ತಡವಾದರೆ ಸಾರ್ವಜನಿಕರಿಗೆ ಸಂಚರಿಸಲು ನಾವೇ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರು. ಹೀಗೆ ಹೇಳಿದವರು ಉದ್ಘಾಟನೆಗೆ ಆಹ್ವಾನ ತಡವಾಗಿ ಬಂದಿದೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸಿಗಂದೂರು ಸೇತುವೆ ನಿರ್ಮಾಣದಲ್ಲಿ ಸಾಗರದ ಕ್ಷೇತ್ರದ ಶಾಸಕರ ಕೊಡುಗೆ ಶೂನ್ಯ
ಸೇತುವೆ ನಿರ್ಮಾಣ ಕಾರ್ಯದಲ್ಲಿ ಸಾಗರದ ಶಾಸಕರ ಕೊಡುಗೆ ಶೂನ್ಯವಾಗಿರುವುದರಿಂದ ಅಪಪ್ರಚಾರದ ಕೆಲಸ ಮಾಡುತ್ತಿದ್ದಾರೆ. ಸಂಸದ ರಾಘವೇಂದ್ರ ಅವರು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದರಿಂದ ಜನರು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರ ಪ್ರಯತ್ನದ ಫಲವಾಗಿಯೇ ಸಿಗಂದೂರು ಸೇತುವೆ ನಿರ್ಮಾಣವಾಗಿದೆ. ಇದಲ್ಲದೆ ಹತ್ತಾರು ರೈಲ್ವೆ ಯೋಜನೆಗಳು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ.
ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ವಿನಹಃ ಅಪಪ್ರಚಾರ ಮಾಡಬಾರದು
ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ಉತ್ತಮ ಕೆಲಸ ಮಾಡುತ್ತಿರುವ ಸಂಸದರೊಂದಿಗೆ ಕೈಜೋಡಿಸಬೇಕು. ಅದನ್ನು ಬಿಟ್ಟು ನಿಮ್ಮಪ್ಪನ ಮನೆಯಿಂದ ದುಡ್ಡನ್ನು ತಂದಿಲ್ಲ ಎಂದು ಹೇಳುತ್ತಾ ಹೋದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆಯೇ ? ಅಪಪ್ರಚಾರ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ