ಪ್ರೌಢ ಶಾಲಾ ಶಿಕ್ಷಕ ಎನ್.ಡಿ.ಹೆಗಡೆ ಗೆ ಕರುನಾಡ ಕವಿ ರತ್ನ ಪ್ರಶಸ್ತಿ.
ಸಾಗರ : ತಾಲ್ಲೂಕಿನ ಆನಂದಪುರದ ಪ್ರೌಢ ಶಾಲಾ ಶಿಕ್ಷಕ ಎನ್ .ಡಿ.ಹೆಗಡೆ ಯವರಿಗೆ ಈ ಸಾಲಿನ ಕರುನಾಡ ಕವಿ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಈ ಪ್ರಶಸ್ತಿಯನ್ನು ಕರುನಾಡ ಕಲ್ಪ ವೃಕ್ಷ ಪೌಂಡೇಷನ್ (ರಿ) ಈ ಪ್ರಶಸ್ತಿ ನೀಡುತ್ತಿದೆ.7/12/2025 ರಂದು ಹಾವೇರಿಯ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಪ್ರಥಮ ಸಾಹಿತ್ಯ ಕಲ್ಪವೃಕ್ಷೋತ್ಸವ ಸಂಭ್ರಮ 2025- 26 ರ ಸಮಾರಂಭದಲ್ಲಿ ಹೆಗಡೆಯವರಿಗೆ ಈ ಪ್ರಶಸ್ತಿ ನೀಡಿ ಗೌವರಿಸಲಾಗುತ್ತಿದೆ ಎಂದು ಪೌಂಡೇಷನ್ ರಾಜ್ಯಾಧ್ಯಕ್ಷೆ ಶ್ರೀಮತಿ ರೇಖಾ ಶಿವರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಹೊಸನಗರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಚಿಕ್ಕಜೇನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಡಿ.ಹೆಗಡೆಯವರು ಈಗಾಗಲೇ ಜಲ ರತ್ನ ಕವಿ ಎಂಬ ಅಂಕಿತದೊಂದಿಗೆ ಸಾವಿರಾರು ಕವನಗಳನ್ನು ಬರೆದು ಸಾಹಿತ್ಯ ಸೇವೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ದಾನಿಗಳ ನೆರವು ಪಡೆದು ತಮ್ಮ ಶಾಲೆಯಲ್ಲಿ ಸುಸಜ್ಜಿತ ಸಭಾಂಗಣ, ಶಾಲಾ ಕಾರಿಡಾರ್ ಗೆ ಇಂಟರ್ ಲಾಕ್ ಅಳವಡಿಕೆ, ಶಾಲಾ ಕೈತೋಟ ನಿರ್ಮಾಣ, ತೆಂಗಿನ ಗಿಡಗಳ ಕೃಷಿ, ಹೂವಿನ ಗಿಡಗಳ ಸಂಗ್ರಹ ಇತ್ಯಾದಿ ನಡೆಸಿ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಾತಾಗಿದ್ದಾರೆ.ವಿಜ್ಞಾನ ನಾಟಕ,ಪ್ರತಿಭಾ ಕಾರಂಜಿ, ವಚನ ಸಾಹಿತ್ಯ ಸ್ಪರ್ಧೆ ಗಳಲ್ಲಿ ಗೆಲವು ಪಡೆಯಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರವಾಸ, ಶೈಕ್ಷಣಿಕ, ಸಾಧಕರ ಪರಿಚಯ, ಕೃಷಿ ಯಶೋಗಾಥೆ ಇತ್ಯಾದಿ ವಿಷಯ ಆಧರಿಸಿ ನೂರಾರು ಲೇಖನ ಬರೆದಿದ್ದಾರೆ. ಬಿಡುವಿನ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಬೋರ್ ಪಾಯಿಂಟ್ ಗುರುತಿಸಿ ಯಶಸ್ವಿಯಾಗಿ ಜಲ ತಜ್ಞ ಎನಿಸಿಕೊಂಡಿದ್ದಾರೆ.ಹತ್ತು ಹನ್ನೆರಡು ಬೋರ್ ವಿಫಲವಾದ ಜಮೀನಿನಲ್ಲಿ ಸಹ ಬೋರ್ ಪಾಯಿಂಟ್ ಗುರುತಿಸಿ ಉತ್ತಮ ನೀರು ದೊರಕಿಸಿಕೊಟ್ಟಿದ್ದಾರೆ.ಸಾವಿರಾರು ರೈತರಿಗೆ ಈ ರೀತಿ ಪರೋಕ್ಷ ಸಹಾಯ ಮಾಡಿ ದೊರೆತ ಹಣದ ಕೆಲ ಭಾಗವನ್ನು ಶಾಲೆಯ ಭೌತಿಕ ಪ್ರಗತಿ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ವಿನಿಯೋಗಿಸುತ್ತಿದ್ದಾರೆ . ತಾವು ಪಾಠ ಮಾಡುವ ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರತಿ ವರ್ಷ ಶೇ.100 ಬರುವಂತೆ ಉತ್ತಮ ಬೋಧನೆ ನಡೆಸುತ್ತಿದ್ದಾರೆ.ಇವರ ಕ್ರಿಯಾಶೀಲತೆ ಗುರುತಿಸಿ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ವಿವಿಧ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನಿಸಿ ಗೌರವಿಸಿದೆ.ಸಾಹಿತ್ಯ ಮತ್ತು ಸಮಾಜ ಸೇವಾ ಕಾರ್ಯಕ್ಕೆ ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಹವ್ಯಕ ಮಹಾ ಸಭಾ ಇವರಿಗೆ ಹವ್ಯಕ ರತ್ನ ಪ್ರಶಸ್ತಿ, ಸರಸ್ವತಿ ವಿದ್ಯಾಕೇಂದ್ರ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ, ಯಲ್ಲಾಪುರದ ಗ್ರಾಮಸ್ಥರು ಜಲ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.





