ಸಾಗರ- ಪರೋಪಕಾರ ಜಗದ ಧರ್ಮವಾಗಬೇಕು ಎಂದು ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ನೆಹರೂ ಮೈದಾನದ ಆದಿನಾಥ ದಿಗಂಬರ ಜೈನ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಶ್ರೀಕ್ಷೇತ್ರ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಸ್ವಾಮಿಗಳ ಪುರಪ್ರವೇಶ ಹಾಗೂ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶಿರ್ವಚನ ನೀಡಿ, ದ್ವೇಷ ಅಸೂಯೆಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ, ಪರಸ್ಪರ ಪ್ರೀತಿ ವಿಶ್ವಾಸದಿಂದ ಜನರು ಬದುಕಬೇಕಾಗಿದೆ. ಜೀವನದಲ್ಲಿ ಶಾಂತಿ ನೆಮ್ಮದಿ ಮುಖ್ಯವಾಗಿದೆ. ಜಗತ್ತಿನಲ್ಲಿ ಧರ್ಮ ಸಹಿಷ್ಣುತೆ ಬೇಕಾಗಿದೆ. ಸಹಬಾಳ್ವೆಯಿಂದ ಬದುಕುವಂತಾಗಬೇಕು. ಪ್ರಾಚೀನ ಕಾಲದಿಂದಲೂ ಜೈನ ಧರ್ಮ ಅಹಿಂಸೆಯನ್ನು ಸಾರುತ್ತ ಬಂದಿದೆ. ತ್ಯಾಗದಿಂದ ಮಾತ್ರ ಜಗದಲ್ಲಿ ಶಾಂತಿ ನೆಲಸಲು ಸಾಧ್ಯ. ಮನಸು ಮನಸುಗಳನ್ನು ಬೆಸೆಯುವ ಕೆಲಸ ಆಗಬೇಕಾಗಿದೆ. ದಾರ್ಶನಿಕರ ಆದರ್ಶ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಪಾಲಿಸುವಂತಾಗಬೇಕು.ಮಾತುಗಳಿಗಿಂತ ಅನುಷ್ಠಾನ ಮುಖ್ಯವಾಗಬೇಕು. ಶ್ರವಣಬೆಳಗೊಳಕ್ಕೆ ತನ್ನದೆಯಾದ ಇತಿಹಾಸವಿದೆ. ಅಹಿಂಸೆ, ತ್ಯಾಗ ಸಂದೇಶಗಳನ್ನು ಸಾರುವ ಭಗವಾನ್ ಬಾಹುಬಲಿ ಮೂರ್ತಿ ನಮ್ಮ ಕಣ್ಣೆದುರಿಗೆ ನಿಂತಿರುವುದು ಇಂದಿಗೂ ಸರ್ವಧರ್ಮಿಯರಿಗೂ ಆದರ್ಶಪ್ರಾಯವಾಗಿದೆ. ಪೂರ್ವಶ್ರಮದ ಜನ್ಮ ಭೂಮಿ ನಮ್ಮ ಸಾಗರ ಅನೇಕ ವಿಶೇಷಗಳನ್ನು ಹೊಂದಿದ್ದು, ಇಲ್ಲಿ ಸರ್ವಧರ್ಮಿಯರು ಸಮನ್ವಯತೆಯಿಂದ ಜೀವನ ನಡೆಸುತ್ತಿರುವುದು. ಇಲ್ಲಿನ ಇತಿಹಾಸ, ಸಂಸ್ಕೃತಿ ಆಚಾರ ವಿಚಾರಗಳು ಎಲ್ಲಾರಿಗೂ ಮಾದರಿಯಾಗಿವೆ. ಇಂತಹ ಸಾಗರದಲ್ಲಿ ಬದುಕುತ್ತಿರುವ ನೀವೆಲ್ಲರೂ ಪುಣ್ಯವಂತರು ಎಂದು ಹೇಳಿದರು.
ಪ್ರತಿಯೊಬ್ಬರು ಕೊಡುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ತಮ್ಮ ದುಡಿಮೆಯ ಪಾಲಿನ ಒಂದಿಷ್ಟು ಸಮಾಜಕ್ಕೆ ನೀಡಬೇಕು. ಪೂಜೆ ಪುನಸ್ಕಾರದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅಂತಹ ಕಾರ್ಯವನ್ನು ನಾನು ನನ್ನ ಬಾಲ್ಯದಲ್ಲಿಯೇ ನನ್ನ ತಂದೆ ತಾಯಿಯರು ಬೆಳೆಸಿದರು. ಇಲ್ಲಿನ ಶಿಕ್ಷಕರು ಸ್ನೇಹಿತರು ಅನೇಕರು ನನಗೆ ನೀಡಿದ ಪ್ರೀತಿ ಪ್ರೋತ್ಸಾಹವೆ ಇಂದು ಶ್ರವಣಬೆಳೆಗೊಳ ಮಠದ ಸ್ವಾಮಿಜಿಯಾಗಲು ಸಾಧ್ಯವಾಯಿತು. ಅಷ್ಟೆ ಅಲ್ಲದೆ ಹೊಂಬುಚ ಹಾಗೂ ಸೋಂದಾ ಜೈನ ಮಠದ ಶ್ರೀಗಳ ನಿರಂತರ ಮಾರ್ಗದರ್ಶನವನ್ನು ಮರೆಯುಂತಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ತನ್ನ ಬಾಲ್ಯದ ನೆನಪುಗಳನ್ನು ಮಾಡಿಕೊಳ್ಳುವು ಮೂಲಕ ಭಾವನಾತ್ಮಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಗರದ ಅದಿದೇವರುಗಳಾದ ಗಣಪತಿ ಹಾಗೂ ಮಾರಿಕಾಂಬ ಜೊತೆಗೆ ಸಂತ ವರದಹಳ್ಳಿ ಶ್ರೀಧರಸ್ವಾಮಿಗಳನ್ನು ಸ್ಮರಿಸಿದರು.
ಸೋಂದ ಜೈನ ಮಠದ ಅಕಲಂಕ ಕೇಸರಿ ಸ್ವಾಮಿಗಳು ಆಶಿರ್ವಚನ ನೀಡಿ, ಸಾಧನೆಗೆ ಮನದ ಇಚ್ಚೆ ಮುಖ್ಯವಾಗಿದೆ. ಅದಕ್ಕೆ ಪೂರಕವಾಗಿ ಪ್ರೋತ್ಸಾಹ ಮಾರ್ಗದರ್ಶನದ ಅವಶ್ಯಕತೆ ಇದೆ. ಪ್ರಸ್ತುತ ದಿನಗಳಲ್ಲಿ ಜನರಿಗೆ ಶಾಂತಿಯ ಜೀವನ ಬೇಕಾಗಿದೆ. ಪ್ರತಿಯೊಬ್ಬರಲ್ಲೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಾಗಿದೆ. ಸಾಗರದಲ್ಲಿ ಆಡಿ ಬೆಳೆದ ಶ್ರವಣಬೆಳಗೊಳದ ಶ್ರೀಗಳ ಇಂದಿನ ಪುರ ಪ್ರವೇಶ ಹಾಗೂ ಅವರಿಗೆ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಾಗರದ ಋಣಭಾರವನ್ನು ತೀರಿಸಿಕೊಂಡಿದ್ದೀರಿ. ಅಷ್ಟೆ ಅಲ್ಲದೆ ಸಾಗರ ಜಗತ್ತಿಗೆ ಮಾದರಿಯಾಗುವಂತಹ ಕೊಡುಗೆಯನ್ನು ನೀಡಿದ್ದು ಅಭಿನಂದಿನಿಯ ಸಂಗತಿಯಾಗಿದೆ. ಇಂತಹ ಸನ್ನಿವೇಶಗಳು ಸದಾ ನೆನಪಿನಲ್ಲಿ ಉಳಿಯುವಂತಾದ್ದಾಗಿದೆ. ಮತ್ತೊಬ್ಬರನ್ನು ಗೌರವ ಭಾವದಿಂದ ಕಾಣುವ ಮನಸುಗಳು ಹೆಚ್ಚಾಗಬೇಗಾಗಿದೆ. ಆ ನಿಟ್ಟಿನಲ್ಲಿ ಸಾಗರದ ಸಮಸ್ತ ಜನತೆ ಮುಂದಾಗಿದ್ದು ಸಾಗರದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂತಹ ಪೂಜ್ಯಶ್ರೀಗಳನ್ನು ನೀಡಿದ ನಿಮ್ಮ ಹೃದಯವಂತಿಕೆ ಮೆಚ್ಚುವಂತಹದ್ದು. ಈ ಚಿಕ್ಕವಯಸ್ಸಿನಲ್ಲಿಯೆ ಶ್ರೀಗಳ ಆಚಾರ ವಿಚಾರ, ನಡೆ-ನುಡಿ, ಇಂದು ಜಗತ್ತಿಗೆ ಬೆಳಕಾಗುತ್ತಿದೆ. ಕಿರಿಯ ವಯಸ್ಸಿನಲ್ಲಿಯೇ ಇಂತಹ ಹಿರಿದಾದ ಜವಬ್ದಾರಿಯನ್ನು ಹೊಂದಿರುವುದು ವಿಶೇಷವಾಗಿದೆ. ಬಾಲ್ಯದಿಂದಲೂ ನಡೆಸಿಕೊಂಡು ಬಂದ ಪೂಜೆ ಪುನಸ್ಕಾರಗಳೆ ಅವರನ್ನು ಈ ಮಟ್ಟಕ್ಕೆ ತರಲು ಸಾಧ್ಯವಾಗಿದೆ ಅವರ ಹಾಗೂ ಜೈನ ಧರ್ಮದ ಸಿದ್ದಾಂತಗಳು ಜಗದಗಲ ಬೆಳಗಲಿ ಎಂದು ಆಶಿರ್ವಚನ ನೀಡಿದರು.
ಜೈನ ಧರ್ಮಕ್ಕೆ ವಿಶೇಷವಾದ ಶಕ್ತಿ ಇದೆ – ಶಾಸಕ ಗೋಪಾಲಕೃಷ್ಣ ಬೇಳೂರು
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಮಾತನಾಡಿ ಜೈನಧರ್ಮಕ್ಕೆ ಜಗತ್ತಿನಲ್ಲಿ ವಿಶೇಷವಾದ ಶಕ್ತಿಯಿದೆ, ಎಲ್ಲಾ ಧರ್ಮಗಳಿಗಿಂತಲೂ ಭಿನ್ನವಾಗಿದ್ದು ಜಗತ್ತಿಗೆ ಅಹಿಂಸೆ ಮತ್ತು ಶಾಂತಿಯನ್ನು ನೀಡಿದ ಧರ್ಮವಾಗಿದೆ. ಇವುಗಳ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ, ಜಗತ್ತಿನಲ್ಲಿ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಅದರಲ್ಲೂ ಸಾಗರದಂತಹ ಊರಿನಲ್ಲಿ ಜೈನಧರ್ಮದ ಶ್ರೀಗಳು ಸೇರಿದಂತೆ ಅನೇಕ ಸಾಧಕರು ಈ ಊರಿನಲ್ಲಿ ಇದ್ದಾರೆ ಎನ್ನುವುದು ಸಂತಸದ ಸಂಗತಿ. ನಮ್ಮ ಊರಿನ ಕೀರ್ತಿಯನ್ನು ಬೆಳಗೊಳದ ಮೂಲಕ ಜಗತ್ತಿಗೆ ಸಾರಿದ ಅಭಿನವ ಚಾರುಕೀರ್ತಿ ಸ್ವಾಮಿಗಳಿಗೆ ವಿಶೇಷವಾದ ಅಭಿನಂದನೆಗಳನ್ನು ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಸಲ್ಲಿಸುತ್ತಿದ್ದೇನೆ. ನಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಬದುಕಿ ತೋರಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕೆ ಗುರು ಹಿರಿಯರ ಮಾರ್ಗದರ್ಶನ ತುಂಬಾ ಅಗತ್ಯ ಎಂದವರಲ್ಲದೆ ಹುಂಚ ಹಾಗೂ ಸೋಂದ ಜೈನ ಮಠದ ಶ್ರೀಗಳ ಅಭಿವೃದ್ದಿ ಕಾರ್ಯ ಅಭಿನಂದನಿಯವಾಗಿದೆ ಎಂದು ಹೇಳಿದರು.
ಹೊಂಬುಚ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಸ್ವಾಮಿಗಳು ಆಶಿರ್ವಚನ ನೀಡಿ, ಜೈನ ಧರ್ಮ ಮೋಕ್ಷ ಮಾರ್ಗಕ್ಕೆ ದಾರಿ ದೀಪವಾಗಿದೆ. ಜೈನ ಧರ್ಮದ ಆದರ್ಶ, ತತ್ವ, ಸಿದ್ದಾಂತಗಳನ್ನು ಪಾಲಿಸಿದಲ್ಲಿ ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಋಷಿಮುನಿಗಳು, ಗುರುಪೀಠಗಳ ಮಾರ್ಗದರ್ಶನ ಸಮಾಜಕ್ಕೆ ತುಂಬಾ ಅಗತ್ಯವಾಗಿದೆ, ಅವರ ವಿಚಾರಧಾರೆಗಳನ್ನು ಪಾಲಿಸುವ ಮೂಲಕ ಜೀವನ ಸಾಕ್ಷಾತ್ಕಾರವನ್ನು ಕಂಡುಕೊಳ್ಳಬೇಕಾಗಿದೆ. ಹಾಗಾಗಿ ಸಾಗರ ಇಂದು ಜಗತ್ತಿಗೆ ಮಾದರಿಯಾಗಿರುವುದು ಇಲ್ಲಿನ ಶ್ರವಣಬೆಳಗೊಳ ಶ್ರೀಗಳ ಕೊಡುಗೆ ಅಪಾರವಾಗಿದೆ ಅವರ ಎಲ್ಲಾ ಕಾರ್ಯಗಳಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ ಜೈನ ಧರ್ಮದಲ್ಲಿ ವೈರಾಗ್ಯಕ್ಕೆ ವಿಶೇಷವಾದ ಮಹತ್ವವಿದೆ, ತ್ಯಾಗಕ್ಕೆ ಮೊದಲ ಆಧ್ಯತೆಯನ್ನು ನೀಡಿದ್ದು ಅಹಿಂಸೆ ಎನ್ನುವುದು ಧರ್ಮದ ಮೂಲ ಧ್ಯೇಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸರ್ವತೋಭದ್ರ ಜೈನ ಸಮಾಜದ ಅಧ್ಯಕ್ಷ ಗಜೇಂದ್ರಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ವಡನ್ ಬೈಲ್ ನ ಧರ್ಮದರ್ಶಿ ಹೆಚ್.ಎಂ.ವೀರರಾಜಯ್ಯ ಜೈನ್, ಲೋಕಾಯುಕ್ತ ಡಿ.ವೈ.ಎಸ್.ಪಿ ವೀರೇಂದ್ರಕುಮಾರ್ , ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಚಂದ್ರಕಲಾ ಜೈನ್, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷರಾದ ಛಗಲ್ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಮಹಿಳಾ ಸಮಾಜ ಸ್ವಾಗತ ಗೀತೆಯನ್ನು ಹಾಡಿದರು, ಜ್ಯೋತಿ ನೇಮಿರಾಜ್ ಸ್ವಾಗತಿಸಿ, ಡಾ.ಮಹಾವೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಸಂಪತ್ ಕುಮಾರ್ ಶ್ರೀಗಳ ಕುರಿತು ಗುರುವಂದನಾ ನುಡಿಗಳನ್ನಾಡಿದರು, ಯಶೋಧರ ಇಂದ್ರ ಅಭಿನಂದನ ಪತ್ರ ವಾಚಿಸಿದರು, ವಿ.ಟಿ.ಸ್ವಾಮಿ ವಂದಿಸಿ ಕುಮುದಾ ಕಾರ್ಯಕ್ರಮ ನಿರೂಪಿಸಿದರು.
ಸಂಭ್ರಮದ ಮೆರವಣಿಗೆ
ಸಾಗರದ ತ್ಯಾಗರ್ತಿ ವೃತ್ತಕ್ಕೆ ಶ್ರವಣಬೆಳಗೊಳ ಶ್ರೀಗಳು ಪ್ರವೇಶವಾಗುತ್ತಿದ್ದಂತೆ ಜಯಘೋಷ ಮೊಳಗಿತು, ಶಾಸಕರಾದ ಗೋಪಾಲಕೃಷ್ಣ ಬೇಳೂರು ತಾಲ್ಲೂಕಿನ ಪರವಾಗಿ ಸ್ವಾಗತಿಸಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಮೊದಲಾದ ಗಣ್ಯರು ಹಾಜರಿದ್ದರು. ನವೀನ್ ಕುಮಾರ್ ಜೈನ್ ಮತ್ತು ಕುಟುಂಬದವರು ಪುಷ್ಪಾರ್ಚನೆ ಸಲ್ಲಿಸಿ ಸ್ವಾಗತಿಸಿದರು. ದಾರಿಯುದ್ದಕ್ಕು ನೂರಾರು ಕಾರು, ಬೈಕ್ ರ‍್ಯಾಲಿ ಸಾರ್ವಜನಿಕರನ್ನು ಮನಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಈ ಮೆರವಣಿಗೆಯನ್ನು ನಡೆಸಲಾಯಿತು. ನಂತರ ಸಾಗರದ ಗಣಪತಿ ದೇವಾಲಯದ ಸಮೀಪ ಶ್ವೇತಾಂಬರ ಜೈನ ಮಂದಿರದಲ್ಲಿ ಶ್ರೀಗಳನ್ನು ಪುರಕ್ಕೆ ಆಹ್ವಾನಿಸಲಾಯಿತು.
ಪೂಜ್ಯರ ಮಾರ್ಗದರ್ಶನ ಅಗತ್ಯ – ಸಂಸದ ಬಿ.ವೈ ರಾಘವೇಂದ್ರ
ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ.ರಾಘವೇಂದ್ರ ಸ್ವಾಗತಿಸಿ ಮಾತನಾಡಿ ಶ್ರವಣಬೆಳಗೊಳ ಶ್ರೀಗಳು ನಮ್ಮ ಊರಿನವರೆ ಎನ್ನುವುದು ಸಂತಸದ ಸಂಗತಿ. ಜೈನ ಧರ್ಮದ ಆದರ್ಶಗಳನ್ನು ಪಾಲಿಸುವ ಕೆಲಸ ಆಗಬೇಕಾಗಿದೆ ಇಂತಹ ಪೂಜ್ಯರ ಮಾರ್ಗದರ್ಶನ ತುಂಬಾ ಅಗತ್ಯವಾಗಿದೆ ಎಂದು ಹೇಳಿದರು.
ಜನಮನ ಸೆಳೆದ ಪುರಪ್ರವೇಶ ಮೆರವಣಿಗೆ:
ಸಾಗರಕ್ಕೆ ಸಾಗರವೇ ನಿಬ್ಬೆರಗಾಗುವಂತಹ ರೀತಿಯಲ್ಲಿ ಶ್ರೀಗಳ ಪುರಪ್ರವೇಶ ಮೆರವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಮಂಗಳ ವಾದ್ಯಗಳು, ಜಯಕಾರ ಮುಗಿಲು ಮುಟ್ಟಿತು. ದಾರಿಯುದ್ದಕ್ಕೂ ಶ್ರೀಗಳ ಪಾದಕ್ಕೆರಗಿ ಪಾವನಾರದರು. ಕೆಲವರು ದೂರದಿಂದ ತಲೆಬಾಗಿ ನಮಸ್ಕರಿಸಿದರು.





