ಸಾಗರ : ತಾಲ್ಲೂಕಿನ ಆನಂದಪುರ ವಾರದ ಸಂತೆಯಲ್ಲಿ ಹಲವು ಸಮಸ್ಯೆಗಳಿದ್ದು, ಶಾಶ್ವತ ಪರಿಹಾರಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮುಂದಾಗಿದ್ದಾರೆ.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಆನಂದಪುರದಲ್ಲಿ ಬುಧವಾರ ನಡೆಯುವ ವಾರದ ಸಂತೆಗೆ ಭೇಟಿ ನೀಡಿ ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿದರು.
ವಾರದ ಸಂತೆಯಲ್ಲಿ ರಸ್ತೆಯಲ್ಲಿಯೇ ವ್ಯಾಪಾರಸ್ಥರು ತರಕಾರಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರು ಮುಕ್ತವಾಗಿ ಸಂಚಾರ ಮಾಡಿ ಸಂತೆ ಮಾಡಲು ಬಹಳ ಪರದಾಡುತ್ತಿದ್ದರು. ಜೊತೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ಜಾಗವಿದ್ದರೂ ಸಹ ಕೆಲವೆಡೆ ಮೇಲ್ಚಾವಣಿ ವ್ಯವಸ್ಥೆ ಇರಲಿಲ್ಲ. ಇದರಿಂದ ವ್ಯಾಪಾರಸ್ಥರು ಮಳೆಯಲ್ಲಿಯೇ ವ್ಯಾಪಾರ ಮಾಡುವಂತಾಗಿತ್ತು. ಇದನ್ನು ಮನಗಂಡ ಶಾಸಕರು ಮೂರು ಶೆಡ್ ಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿಯೇ ಮೀನು ಚಿಕನ್ ಮಾರಾಟ ಮಾಡಬೇಕು -ಶಾಸಕರ ಖಡಕ್ ಸೂಚನೆ
ಇನ್ನು ಮುಂದೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಚಿಕನ್ ಮೀನು ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಕೆರೆಯ ಪಕ್ಕದಲ್ಲಿ, ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಮಾರಾಟ ಮಾಡಿ ಗಲೀಜು ಮಾಡುವಂತಿಲ್ಲ. ಕೂಡಲೇ ಎಲ್ಲಾ ಮಾಂಸ ಮಾರಾಟ ಅಂಗಡಿಗಳನ್ನು ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಕಲಸೆ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಆನಂದಪುರ ಘಟಕದ ಅಧ್ಯಕ್ಷ ಗಜೇಂದ್ರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಕುಮಾರಿ, ಪ್ರಮುಖರಾದ ಉಮೇಶ್ ಎನ್, ಅಶ್ವಿನ್, ರಮಾನಂದ, ರಹಮತ್ ವುಲ್ಲಾ, ಗಿರೀಶ್ ಕೊವಿ, ಮಂಜುನಾಥ್ ಇದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇