ಸಾಗರ : ತಾಲ್ಲೂಕಿನ ಸಮೀಪದ ಉಳ್ಳೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಉಳ್ಳೂರು ಸಮೀಪ ಮುಂಡಿಗೆಮಟ್ಟಿ ಕ್ರಾಸ್ ಬಳಿ ಕ್ಯಾಂಟರ್ ಹಾಗೂ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪವಿತ್ರ ಹಾಗೂ ವೀರೇಶ್ ಅವರು ತಮ್ಮ ಸ್ನೇಹಿತರ ಕಾರ್ಯಕ್ರಮಕ್ಕೆ ಆನಂದಪುರಕ್ಕೆ ಹೋಗಿ ಸಾಗರಕ್ಕೆ ಬರುತ್ತಿದ್ದ ಸಮಯದಲ್ಲಿ ಉಳ್ಳೂರು ಸಮೀಪ ಅತಿ ವೇಗವಾಗಿ ಬಂದ ಕ್ಯಾಂಟರ್ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಇಬ್ಬರಿಗೂ ತಲೆ ಹಾಗೂ ಮೈ ಕೈಗೆ ತೀವ್ರವಾದ ಹೊಡೆತ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೊರಬ ತಾಲೂಕಿನ ಮಲಳಗದ್ದೆ ಚನ್ನಬಸವಯ್ಯ ಪುತ್ರಿ ಪವಿತ್ರ (25), ಸಾಗರ ತಾಲೂಕು ತಡಗಳಲೆ ಗ್ರಾಮದ ಸತೀಶ್ ಗೌಡ ಅವರ ಪುತ್ರ ವೀರೇಶ್ (25) ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ.
ಸ್ಥಳಕ್ಕೆ ಅನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.





