ಸಾಗರ : ತಾಲ್ಲೂಕಿನ ಹಲವೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ, ಮನೆ, ರೈತರು ಬೆಳೆದ ಬೆಳೆ ಹಾನಿ ಉಂಟಾಗಿದೆ.
ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಹೆಬ್ಬರಿಗೆ ಗ್ರಾಮದ ಸರ್ವೆ ನಂ. 5 ರಲ್ಲಿ ಭತ್ತದ ಬೆಳೆ ಬೆಳೆದ ರುಕ್ಮಿಣಿ ಹಾಗೂ ಸರ್ವೆ ನಂ. 53 ರಲ್ಲಿ ಬೆಳೆ ಬೆಳೆದ ಜಯಶ್ರೀಯವರ ನಾಟಿ ಭತ್ತದ ಗದ್ದೆಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಸಂಪೂರ್ಣ ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರಿ ಮಳೆಗೆ ಹಳ್ಳದ ದಂಡೆಗಳು ಒಡೆದು ನಾಟಿ ಮಾಡಿದ ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿರುವುದು ಮಾತ್ರವಲ್ಲದೆ, ನಾಟಿ ಮಾಡಿದ ಭತ್ತದ ಗದ್ದೆಗಳ ಮೇಲೆ ಭಾರಿ ಪ್ರಮಾಣದ ಮರಳು ಸೇರಿಕೊಂಡಿದೆ. ಇದರಿಂದ ಉಳಿದ ಅಲ್ಪ ಸ್ವಲ್ಪ ಭತ್ತದ ಸಸಿಗಳಿಂದ ಸಹ ಫಸಲು ಬರುವುದು ಅಸಾಧ್ಯವಾಗಿದೆ.
ಈಗ ಮತ್ತೆ ಮರು ನಾಟಿ ಮಾಡೋಣ ಎಂದರೆ ಸಸಿ ಸಿಗುವುದು ಅಸಾಧ್ಯವಾಗಿದೆ. ಜೊತೆಗೆ ಭಾರಿ ಪ್ರಮಾಣದಲ್ಲಿ ಮರಳು ಸೇರಿಕೊಂಡಿರುವುದರಿಂದ ನಾಟಿ ಮಾಡಿದರು ಸಹ ಉತ್ತಮ ಫಸಲು ಬರುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಬೆಳೆ ನಂಬಿಕೊಂಡೆ ನಮ್ಮ ಮುಂದಿನ ಜೀವನ ಸಾಗುವುದು. ಈಗ ಭಾರಿ ಮಳೆಗೆ ನಾಟಿ ಮಾಡಿದ ಸಸಿ ಕೊಚ್ಚಿಕೊಂಡು ಹೋಗಿರುವುದರಿಂದ ಜೀವನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.