ಸಾಗರ : ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರದಿಂದ ಬೆಳೆಸಿ ಉತ್ತಮ ಸದೃಢ ಪ್ರಜೆಯನ್ನಾಗಿ ರೂಪಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಮೂಲೆಗದ್ದೆಮಠದ ಅಭಿನವ ಚನ್ನಬಸವ ಸ್ವಾಮೀಜಿ ಕರೆ ನೀಡಿದರು.
ಅವರು ಆನಂದಪುರ ಸಮೀಪದ ಸರಗುಂದದ ದಂಡಿಗೆಸರದಲ್ಲಿ 25ನೇ ವರ್ಷದ ಗಣಪತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭೂಮಿ ಮೇಲೆ ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಹುಟ್ಟು ಮತ್ತು ಸಾವಿನ ನಡುವೆ ಇರುವುದೇ ಜೀವನ. ಸತ್ತ ಮೇಲೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಈ ಭೂಮಿ ಮೇಲೆ ಬಾಳಿ ಬದುಕಿ ಹೋಗಬೇಕು ಆಗ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಯುವಜನರು ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಹೊರಬಂದು ಉತ್ತಮ ಸಮಾಜ ಕಟ್ಟಲು ಯುವಕರು ಸಿದ್ದರಾಗಬೇಕು ಎಂದು ಸಲಹೆ ನೀಡಿದರು.
ಕೆಂಜಿಗಾಪುರದ ಶ್ರೀಧರ್ ಭಟ್ ಮಾತನಾಡಿ, ಗಣೇಶ ಹಬ್ಬವನ್ನು ಬಾಲ ಗಂಗಾಧರ ತಿಲಕರು ದೇಶದ ಏಕತೆ, ಸಮಗ್ರತೆಗಾಗಿ ಎಲ್ಲಾ ಧರ್ಮ ಮತ್ತು ಜಾತಿಯವರನ್ನು ಒಂದುಗೂಡಿಸಲು ಈ ಹಬ್ಬವನ್ನು ಆಚರಣೆಗೆ ತಂದರು. ಹಾಗೆ ಈ ಗಣೇಶ ಚತುರ್ಥಿಗೆ ಇದರದ್ದೇ ಆದ ಪೌರಾಣಿಕ ಹಿನ್ನೆಲೆಯೂ ಸಹ ಇದೆ ಎಂದು ತಿಳಿಸಿದರು.
ಗಣಪತಿ ಹಬ್ಬವನ್ನು ಶಾಂತಿಯುತವಾಗಿ ಜಾಗೃತೆಯಿಂದ ಆಚರಣೆ ಮಾಡಿ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ, ಗಣೇಶ ಹಬ್ಬವನ್ನು ಶಾಂತಿಯುತವಾಗಿ ಮತ್ತು ಜಾಗೃಕತೆಯಿಂದ ಆಚರಣೆ ಮಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ರಘು, ಅರುಣ ಗೌಡ ಹಾಗೂ ಗಣಪತಿ ಸಂಘದ ಅಧ್ಯಕ್ಷರಾದ ಶರತ್ ಹಾಗೂ ಉಪಾಧ್ಯಕ್ಷರಾದ ಅರುಣ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.