ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಸಾಗರವನ್ನು ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಶಾಸಕ ಗೋಪಾಲಕೃಷ್ಣ ಬೇಳೂರು MLA Gopalakrishna Belur wrote a letter to chief minister siddaramaiah to make Sagara taluk a district.

On: September 8, 2025 5:17 AM
Follow Us:
---Advertisement---

ಸಾಗರ : ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಪತ್ರ ಬರೆದು ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕೆಳದಿ ಸಂಸ್ಥಾನವು ಕ್ರಿ.ಶ 1499 ರಿಂದ 1763 ರ ವರೆಗೆ ಸುಮಾರು 265 ವರ್ಷಗಳ ಕಾಲ ಕೆಳದಿ ಅರಸರಾದ ಕೆಳದಿ ಶಿವಪ್ಪ ನಾಯಕ ಹಾಗೂ ರಾಣಿ ಚೆನ್ನಮ್ಮ ಮುಂತಾದ ಮಹಾರಾಜರು ಆಡಳಿತ ನಡೆಸಿದ ಐತಿಹಾಸಿಕ ಪಟ್ಟಣವಾಗಿರುತ್ತದೆ.

ಸಾಗರ ನಗರವು ಅತಿ ವೇಗವಾಗಿ ಬೆಳೆಯುತ್ತಿರುವ ಮಲೆನಾಡಿನ ಒಂದು ಸುಂದರ ನಗರ. ಸರ್ವೋತ್ತೊಮುಖ ಅಭಿವೃದ್ಧಿಯ ಜೊತೆಗೆ ‘ಉಳುವವನೇ ಹೊಲದೊಡೆಯ’ ದಂತಹ ಕ್ರಾಂತಿಕಾರಕ ಕಾಗೋಡು ಸತ್ಯಾಗ್ರಹ ಮೂಲಕ ರೈತರಿಗೆ ಭೂಮಿ ಕೊಟ್ಟಂತಹ ನಗರವಾಗಿದೆ.

ರಾಜ್ಯಕ್ಕೆ ವಿದ್ಯುತ್ತನ್ನು ನೀಡುತ್ತಿರುವ ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಲಾಗಿದ್ದು,  ಪ್ರವಾಸಿ ತಾಣಗಳಾದ ವಿಶ್ವ ವಿಖ್ಯಾತ ಜೋಗ ಜಲಪಾತ, ಕೆಳದಿ, ಇಕ್ಕೇರಿಯಂತಹ ಪುರಾತನ ದೇವಸ್ಥಾನವಿದ್ದು,  ಶರಾವತಿ ನೀರಿನಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನವಿದೆ.  ವಡಂಬೈಲು ಬಳೆ ಪದ್ಮಾವತಿ ದೇವಸ್ಥಾನ, ವರದಹಳ್ಳಿಯಲ್ಲಿ ಸದ್ಗುರು ಶ್ರೀಧರ ಸ್ವಾಮೀಜಿಗಳ ಪುಣ್ಯಕ್ಷೇತ್ರ, ಸಾಗರ ಮಾರಿಕಾಂಬಾ ದೇವಸ್ಥಾನ ಹಾಗೂ ಮಹಾಗಣಪತಿ ದೇವಸ್ಥಾನಗಳ ಜಾತ್ರಾ ಉತ್ಸವಕ್ಕೆ ಲಕ್ಷಾಂತರ ಜನರು ಬಂದು ಹೋಗುವ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಸಾಗರ ತಾಲ್ಲೂಕು ವರದಾ ನದಿಯ ದಡದಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮಲೆನಾಡಿನ ಸುಂದರ ಪ್ರದೇಶವಾಗಿದ್ದು, ಬಹುತೇಕ ಪ್ರದೇಶವು ಅರಣ್ಯದಿಂದ ಕೂಡಿದ್ದು ಸಾಗರ ತಾಲ್ಲೂಕಿನ  ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆಗೆ ಹೆಸರುವಾಸಿಯಾಗಿದ್ದು, ಅಡಿಕೆ ಬೆಳೆಯಿಂದ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಮತ್ತು ಭತ್ತ, ತೆಂಗು, ಬಾಳೆ, ಶುಂಠಿ ಮುಂತಾದ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

ಸಾಗರ ತಾಲ್ಲೂಕು  ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಹೊಸನಗರ ತಾಲ್ಲೂಕು, ಸೊರಬ ತಾಲ್ಲೂಕು, ಶಿಕಾರಿಪುರ ತಾಲ್ಲೂಕುಗಳನ್ನು ಒಳಗೊಂಡ ಸಾಗರ ತಾಲ್ಲೂಕು ಉಪವಿಭಾಗೀಯ ಸ್ಥಾನವನ್ನು ಹೊಂದಿದೆ.

ಸಾಗರದ ಅಕ್ಕಪಕ್ಕ ತಾಲ್ಲೂಕು ಸೊರಬದಿಂದ ಸಾಗರಕ್ಕೆ 32 km, ಹೊಸನಗರದಿಂದ ಸಾಗರಕ್ಕೆ 35 km,  ಸಿದ್ದಾಪುರದಿಂದ ಸಾಗರಕ್ಕೆ 35 km,  ಶಿಕಾರಿಪುರದಿಂದ ಸಾಗರಕ್ಕೆ 40 km ಅದೇ ರೀತಿ ಸಾಗರ ಪಟ್ಟಣದಿಂದ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ 72 km ದೂರವಿದ್ದು, ಸಾಗರ ತಾಲ್ಲೂಕಿನ ತುತ್ತ ತುದಿಯಿಂದ ಶಿವಮೊಗ್ಗಕ್ಕೆ ಸುಮಾರು 170 km ಗಿಂತ ಅಧಿಕ ದೂರವಿದೆ. ಹೊಸನಗರದಿಂದ ಶಿವಮೊಗ್ಗ ಜಿಲ್ಲೆ ಕೇಂದ್ರಕ್ಕೆ 66 km,  ಸೊರಬದಿಂದ ಶಿವಮೊಗ್ಗಕ್ಕೆ 90km,  ಶಿಕಾರಿಪುರದಿಂದ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ 55 km, ಸಿದ್ದಾಪುರದಿಂದ ಕಾರವಾರ ಜಿಲ್ಲಾ ಕೇಂದ್ರಕ್ಕೆ 141 ದೂರವಿರುತ್ತದೆ. ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ, ಆಸ್ಪತ್ರೆಗೆ ಕೆಲಸಕಾರ್ಯಗಳಿಗೆ ತೆರಳಲು ದೂರವಾಗಿರುತ್ತದೆ.

ಸಾಗರ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗದವರು ಹೆಚ್ಚಾಗಿ ವಾಹಿಸುತ್ತಿದ್ದು,  ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ. ಮೂಲಭೂತ ಸೌಕರ್ಯಗಳಾದ 3 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಮೈಸೂರು/ ಬೆಂಗಳೂರು- ಸಾಗರ- ತಾಳಗುಪ್ಪ ರೈಲ್ವೆ ಮಾರ್ಗಗಳನ್ನು ಹೊಂದಿದ್ದು, ಸಾಗರ ಪಟ್ಟಣದಲ್ಲಿ ಎ.ಸಿ ಕಚೇರಿ, ಡಿ.ವೈ.ಎಸ್.ಪಿ ಕಛೇರಿ , ಆಡಳಿತ ಸೌಧ, ತಾಲ್ಲೂಕು ಪಂಚಾಯಿತಿ ಕಚೇರಿ,  ಸಾಗರ ಟೌನ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ,  ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ 100 ಹಾಸಿಗೆಗಳಿರುವ ಉಪವಿಭಾಗೀಯ ಆಸ್ಪತ್ರೆ ಹಾಗೂ 100 ಹಾಸಿಗೆಗಳಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಆರ್.ಟಿ.ಓ ಕಛೇರಿ ಹಾಗೂ ಆನಂದಪುರ ಬಳಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಹೊಂದಿರುತ್ತದೆ.

ಸಾಗರ ನಗರದಲ್ಲಿ ಪ್ರತ್ಯೇಕ ಕೈಗಾರಿಕಾ ವಲಯವಿದ್ದು,  ಶಿಕ್ಷಣ ವಿಭಾಗದಲ್ಲಿ 4 ಪ್ರಥಮ ದರ್ಜೆ ಕಾಲೇಜುಗಳು, 2 ಸ್ನಾತಕೋತರ ವಿಭಾಗಗಳು,  ಐ.ಟಿ.ಐ, ಡಿಪ್ಲೋಮಾ , 10 ಪದವಿ ಪೂರ್ವ ಕಾಲೇಜುಗಳು ಹಾಗೂ 6 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ 8 ಹಾಸ್ಟೆಲ್, ಹಿಂದುಳಿದ ವರ್ಗಗಳ ಇಲಾಖೆ 28 ಹಾಸ್ಟೆಲ್ ಗಳನ್ನು ಹೊಂದಿರುತ್ತದೆ.

ಸಾಗರ ಸೊರಬ ಸಿದ್ದಾಪುರ ಹೊಸನಗರ ಶಿಕಾರಿಪುರ 5 ತಾಲೂಕುಗಳನ್ನು ಒಳಗೊಂಡು ಕೇಂದ್ರ ಸ್ಥಾನದಲ್ಲಿರುವುದರಿಂದ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ಅನೇಕ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಾಗರ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದಾರೆ.

Join WhatsApp

Join Now

Join Telegram

Join Now

Leave a Comment