ಸಾಗರ : ಪ್ರತಿಯೊಬ್ಬರೂ ಮಾಡುವ ವೃತ್ತಿಯಲ್ಲಿ ಮೋಸ ಅವ್ಯವಹಾರ ವಂಚನೆಗಳಿಗೆ ಅವಕಾಶ ಮಾಡಿಕೊಡದೆ ಪ್ರಾಮಾಣಿಕತೆಯಿಂದ ದುಡಿದರೆ ಭಗವಂತನ ಪ್ರೇರಣೆ ಆಗುತ್ತದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ತಾಲ್ಲೂಕಿನ ಸಮೀಪದ ಆನಂದಪುರದ ಮುರುಘಾಮಠದಲ್ಲಿ ನಡೆದ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನಾವು ನಡೆಯುವ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ತಪ್ಪಿದರೆ ಎಡವಿ ಬೀಳುತ್ತೇವೆ. ಹಾಗೆಯೇ ಜೀವನದಲ್ಲಿ ಸನ್ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಜೀವನದ ಲಯ ತಪ್ಪುತ್ತದೆ. ಸೂರ್ಯನ ಉಗಮದಿಂದ ಕತ್ತಲು ಹೋಗಿ ಬೆಳಕು ಬರುವಂತೆ ನಮ್ಮ ಜೀವನದಲ್ಲಿಯೂ ಸಹ ಅಜ್ಞಾನವೆಂಬ ಕತ್ತಲಿನಿಂದ ಹೊರಬಂದಾಗ ಜೀವನದ ದಾರಿ ಸುಗಮವಾಗುತ್ತದೆ ಎಂದು ಹೇಳಿದರು.
ಭಗವಂತನ ಆರಾಧನೆ ಸೀಮಿತವಾಗಿರದೆ ಜೀವನ ಪರ್ಯಾಂತ ನಡೆಯುತ್ತಿರಬೇಕು. ಭಗವಂತನನ್ನು ನಾವು ಎಲ್ಲಿ ಹುಡುಕುವ ಅವಶ್ಯಕತೆ ಇಲ್ಲ. ನಮ್ಮ ಹೃದಯದಲ್ಲಿಯೇ ನೆಲೆಸಿರುತ್ತಾನೆ. ಆದ್ದರಿಂದ ನಾವು ಹೃದಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ ಜಗದೀಶ್ ಮಾತನಾಡಿ, ಕರ್ನಾಟಕ ಸಮೃದ್ಧವಾಗಿರಲು ಮಠಮಾನ್ಯಗಳು ಕಾರಣವಾಗಿದೆ. 80000ಕ್ಕೂ ಅಧಿಕ ಮಟಗಳಿಂದ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ದಾಸೋಹ ಕಾರ್ಯ ನಡೆಯುತ್ತಿದೆ. ಆ ಕಾರಣದಿಂದ ಮಠಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಠ ಮಾನ್ಯಗಳಿಂದ ಭಕ್ತಿಯ ಕೊಂಡಿಯ ಮೂಲಕ ಜನರ ನಡುವೆ ಬಾಂಧವ್ಯ ಬೆಳೆಸುತ್ತಿವೆ. ರೈತರಿಗೆ ವೈಜ್ಞಾನಿಕ ಬೆಲೆ , ಕಂದಾಯ ನಿಗದಿ ಮಾಡಿದ ಶಿವಪ್ಪ ನಾಯಕನ ಹೆಸರನ್ನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಸ್ವಾಗತಾರ್ಹ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಧನಂಜಯ್ ಸರ್ಜಿ ಮಾತನಾಡಿ, ಜೀವನ ಅಂತ್ಯವಾಗಿ ಮಣ್ಣು ಅಥವಾ ಅಗ್ನಿ ಪಾಲಾಗುವುದಕ್ಕಿಂತ ಮೊದಲು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು. ಆದ್ದರಿಂದ ದಾನ ಧರ್ಮ ಸೇವೆ ಮಾಡಬೇಕು ಅದು ಮಾತ್ರ ಕೊನೆಯವರೆಗೆ ಉಳಿಯುತ್ತದೆ ಎಂದು ಹೇಳಿದರು.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಸಾರ್ಥಕತೆ ಇಲ್ಲದೆ ಜೀವಿಸಿದರೆ ಬದುಕಿಗೆ ಅವಮಾನ, ಆದ್ದರಿಂದ ಜೀವನದಲ್ಲಿ ಬರೀ ನೆಗೆಟಿವ್ ಅಂಶಗಳನ್ನು ಶೇಖರಣೆ ಮಾಡದೆ ಸಮಾಜದ ಹಲವು ಉತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸ್ವಾರ್ಥಿಗಳಾಗಿ ಬದುಕಿದರೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಬದುಕನ್ನ ಪ್ರೀತಿಸಿ ಗೌರವಿಸಬೇಕು ಎಂದು ಹೇಳಿದರು.
ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದಂತ ಮಹಿಳೆಯರಿಗೆ ನೀಡುವ ಕೇಳದಿರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಈ ಬಾರಿ ಬೆಂಗಳೂರಿನ ಏರ್ ಅಂಬ್ಯುಲೆನ್ಸ್ ಮುಖ್ಯಸ್ಥೆ ಶಾಲಿನಿ ನಾಲ್ವಾಡ್ ಅವರಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಂತಹ ಸಾಗರದ ಪತ್ರಕರ್ತರಾದ ಜಿ ನಾಗೇಶ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಣಂದೂರು ಲಿಂಗಪ್ಪನವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುರು ರಕ್ಷೆ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಟಾಕಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ. ಟಿ.ಸ್ವಾಮಿ, ಉದ್ಯಮಿ ಶಿಲ್ಪಾ ಪಾಟೀಲ್, ಕೆಎಲ್ಇ ಸಂಸ್ಥೆಯ ಪ್ರಾಧ್ಯಾಪಕ ಸುಜಯ್ ಆಲಹಳ್ಳಿ, ಪ್ರಮುಖರಾದ ಲಿಂಗಸ್ವಾಮಿಗೌಡರು, ಸುಭಾಷ್ ಕೌತಳ್ಳಿ, ಕೆ .ಬಿ. ದಾನೇಶ್ ಅವರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಕೊಣಂದೂರು ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ದೀಪೋತ್ಸವ ಸಮಿತಿಯ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





