ಸಾಗರ : ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವತ್ತ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ವಕೀಲ ಮಂಜುನಾಥ್ ಆಗ್ರಹಿಸಿದರು.
ಮಾದರ ಚೆನ್ನಯ್ಯ ಜಯಂತಿ ಅಂಗವಾಗಿ ಅವರು ಸಾಗರ ತಾಲ್ಲೂಕಿನ ಆನಂದಪುರ ಸಮೀಪವಿರುವ ಮಹಾಂತಿನ ಮಠ ಚಂಪಕ ಸರಸ್ಸು ನಲ್ಲಿ ಬಾಗಿನ ಸಮರ್ಪಿಸಿ ಮಾತನಾಡಿದರು.
ಮಾದರ ಚೆನ್ನಯ್ಯ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಮಾರ್ಗ ಮಧ್ಯದಲ್ಲಿ ಬರುವ ಮಹಂತಿನಮಠ ಚಂಪಕಸರಸ್ಸು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ ಬಾಗಿನ ಸಮರ್ಪಿಸಿದರು.
ಇತಿಹಾಸ ಸಾರುವ ಇಂತಹ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಇಂತಹ ಪ್ರೇಕ್ಷಣೀಯ ಸ್ಥಳದಲ್ಲಿ ದೊರಕುವ ಇತಿಹಾಸ ಜ್ಞಾನಾರ್ಜನೆಗೆ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಹೇಳಿದರು.
ಇಂತಹ ಐತಿಹಾಸಿಕ ಸ್ಥಳವನ್ನು ಯಶ್ ಅವರ ಯಶೋಮಾರ್ಗದಿಂದ ಅಭಿವೃದ್ಧಿಪಡಿಸಿರುವುದು ಸಂತಸದ ವಿಷಯವಾಗಿದೆ. ಇತಿಹಾಸ ಸಾರುವ ಇಂತಹ ಸ್ಥಳಗಳನ್ನು ಸಾರ್ವಜನಿಕರು ಸಂಘ ಸಂಸ್ಥೆಗಳು ಕಟ್ಟಿ ಬೆಳೆಸಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವಲ್ಲಿ ತನು ಧನ ಮನ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಲೆನಾಡಿನಲ್ಲಿ ಹತ್ತಾರು ಪ್ರವಾಸಿ ಸ್ಥಳಗಳಿದ್ದು, ವಿಶ್ವ ವಿಖ್ಯಾತ ಜೋಗ ಜಲಪಾತ , ಸಿಗಂದೂರು, ಭೀಮೇಶ್ವರ ಮುಂತಾದ ಸ್ಥಳಗಳಿಗೆ ಪ್ರಯಾಣಿಸುವಾಗ ಈ ಐತಿಹಾಸಿಕ ಮಹಾಂತಿನ ಮಠ ಸಿಗುವುದರಿಂದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ.
ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ಹರಿಸಬೇಕು. ಪ್ರಮುಖವಾಗಿ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಿದರೆ ಇಂತಹ ಐತಿಹಾಸಿಕ ಸ್ಥಳಗಳು ತನ್ನಿಂದ ತಾನೇ ಅಭಿವೃದ್ಧಿಯಾಗುತ್ತಾ ಹೋಗುತ್ತವೆ. ಜೊತೆಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿಯೂ ಸಹ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಬೇಕು. ಇದರಿಂದ ಸ್ಥಳೀಯವಾಗಿ ಸಹ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಇಲ್ಲಿನ ಆರ್ಥಿಕ ಬೆಳವಣಿಗೆಗೂ ಸಹ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಮೈಲಾರಪ್ಪ, ಮುತ್ತಣ್ಣ, ಚಂದ್ರು ದೊಡ್ಮನೆ ಗದಗ, ಮೂರ್ತಿ , ಬೈಲಪ್ಪ ದೊಡ್ಡೇರಿ ನೆಲಮಂಗಲ, ದೇವರಾಜು ಮೈಸೂರು, ಸತೀಶ್ ಹುಣಸೂರು, ಮಾರುತಿ, ವಿಶ್ವನಾಥ, ಮುತ್ತಪ್ಪ ಮೇಗೆರೆ, ಶಿವರಾಜ್, ನಟೇಶ್ ಪಿರಿಯಾಪಟ್ಟಣ, ಉದಯ್, ಗುಡವಿ ಸ್ವಾಮಿ, ರವಿಕುಮಾರ್ , ಜಗನ್ನಾಥ್ ಇನ್ನಿತರರು ಉಪಸ್ಥಿತರಿದ್ದರು.