ಸಾಗರ : ಅಕ್ರಮ ಮರಳು ಸಾಗಾಣಿಕೆ ಬಗ್ಗೆ 112 ಗೆ ದೂರು ನೀಡಿದ ಹಿನ್ನೆಲೆಯಲ್ಲಿ ದೂರು ನೀಡಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸನಗರ ತಾಲ್ಲೂಕಿನ ಚಂದಳ್ಳಿ ಗ್ರಾಮದ ವಕೀಲರಾದ ಶರತ್ ಕುಮಾರ್ ಅವರು ಅಕ್ರಮ ಮರಳು ಸಾಗಾಣಿಕೆ ಬಗ್ಗೆ 112 ಗೆ ದೂರು ನೀಡಿದ್ದರು. ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಕಾರಣಕ್ಕಾಗಿ ಜ.15 ರಾತ್ರಿ 12.30 ಕ್ಕೆ ಕೊಲೆ ಮಾಡುವ ಉದ್ದೇಶದಿಂದ ಎರಡು ಕಾರು ಹಾಗೂ 2 ಬೈಕುಗಳಲ್ಲಿ ದೂರುದಾರರನ್ನು ಹಿಂಬಾಲಿಸಿ ಸಾಗರ ತಾಲೂಕಿನ ಕೊರಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿ ದೂರುದಾರರ ಕಾರಿಗೆ ಡಿಕ್ಕಿ ಹೊಡೆಸಿ, ಜಖಂಗೊಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಇದಲ್ಲದೆ ಮೈ ಕೈ ತಲೆ ಮೇಲೆ ಹೊಡೆದು, ಜಂಬಿಟ್ಟಿಗೆ ಕಲ್ಲನ್ನು ಅವರ ಮೇಲೆ ಎತ್ತಿ ಹಾಕಲು ಹೋದಾಗ ತಪ್ಪಿಸಿಕೊಂಡ ಪರಿಣಾಮ ಬಲ ಭುಜದ ಮೇಲೆ ಪೆಟ್ಟಾಗಿದೆ. ಜೊತೆಗೆ ಆರೋಪಿಗಳು ಅವರನ್ನು ಕಾರಿನೊಳಗೆ ಕೂರಿಸಿಕೊಂಡು ಮೈ ಕೈಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪೊಲೀಸ್ ಗೆ ದೂರು ನೀಡಿದರೆ ಎಸ್ .ಸಿ/ಎಸ್.ಟಿ ಹುಡುಗರಿಂದ ಕೇಸ್ ಹಾಕಿಸುವುದಲ್ಲದೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಶರತ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶರತ್ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ದರ್ಶನ್, ಪ್ರವೀಣ್, ಶಿವರಾಮ, ದಿವಾಕರ್ ಹಾಗೂ ಹರೀಶ್ ಅವರನ್ನ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಬಂಧನ ಮಾಡಿದ್ದಾರೆ.





