ಸಾಗರ : ತಾಲೂಕಿನ ಆನಂದಪುರದಲ್ಲಿ ನೂತನ ಅಧ್ಯಕ್ಷರಾದ ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕ್ಷೇತ್ರದಲ್ಲಿ ಇರುವ ನೂರಾರು ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದ್ದು, ಪರಿಹಾರ ದೊರಕಿಸಿ ಕೊಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಗಾಂಜಾ ಸೇವನೆ ಹಾಗೂ ಮಾರಾಟ – ಕಠಿಣ ಕ್ರಮ ಕೈಗೊಳ್ಳಬೇಕು – ಸದಸ್ಯರ ಒಕ್ಕೊರಲ ಅಭಿಪ್ರಾಯ
ಆನಂದಪುರದ ಕೆಲವು ಪ್ರಮುಖ ಸ್ಥಳಗಳಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ನಡೆಯುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ರಕ್ಷಣಾ ಇಲಾಖೆಗೆ ಒತ್ತಾಯ ಮಾಡಿದರು.
112 ಕೆಲವೇ ಸ್ಥಳಗಳಿಗೆ ಸೀಮಿತಗೊಳಿಸಬೇಡಿ – ಸದಸ್ಯ ಮೋಹನ್ ಕುಮಾರ್ ಆಗ್ರಹ
112 ವಾಹನವು ಕೆಲವೇ ಸ್ಥಳಗಳಿಗೆ ಸೀಮಿತವಾಗದೆ ಎಲ್ಲೇಡೆ ಓಡಾಟ ನಡೆಸಬೇಕು. ಪೊಲೀಸರು ಅನಂದಪುರದ ಮುಖ್ಯ ರಸ್ತೆಯಲ್ಲಿ ನಿರಂತರವಾಗಿ ಗಸ್ತು ತಿರುಗುವುದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಜೊತೆಗೆ ಖಾಸಗಿ ಬಸ್ಸುಗಳು ನಿಲ್ದಾಣ ಹೊರತಾಗಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಪೊಲೀಸ್ ಠಾಣೆಗೆ ಬಂದಂತಹ ಸಾರ್ವಜನಿಕರನ್ನು ಗೌರವಿತವಾಗಿ ನಡೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ದನ ಸಾಗಾಟಕ್ಕೆ ಕಡಿವಾಣ ಹಾಕಿ : ಅಧ್ಯಕ್ಷ ಗುರುರಾಜ್
ಆನಂದಪುರದಲ್ಲಿ ದನಸಾಗಾಟ ಹೆಚ್ಚಾಗಿದ್ದು, ಕಾರಿನಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾರೆ. ದನ ಸಾಗಾಟ ಮಾಡುವವರು ಮುಚ್ಚುಗಳನ್ನು ಹಿಡಿದುಕೊಂಡು ಓಡಾಡುತ್ತಿರುತ್ತಾರೆ. ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಗಾಂಜಾ ಹಾಗೂ ದನ ಸಾಗಾಟ ಮಾಡುವರ ಬಗ್ಗೆ ಮಾಹಿತಿ ನೀಡಿ- ಗೌಪ್ಯವಾಗಿ ಇಡಲಾಗುವುದು- ಪಿಎಸ್ಐ ಪ್ರವೀಣ್
ಗಾಂಜಾ ಸೇವನೆ, ಮಾರಾಟ ಹಾಗೂ ದನಸಾಗಟ ಮಾಡುವವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನಿಮಗೆ ಅಂತ ಮಾಹಿತಿ ದೊರೆತಲ್ಲಿ ನಮಗೆ ಮಾಹಿತಿ ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು. ಈಗಾಗಲೇ ಹಲವು ವಿಷಯಗಳ ಮೇಲೆ ಜನಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ. ಇನ್ನು ಮುಂದೆ ಹಂತ ಹಂತವಾಗಿ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು – ಸದಸ್ಯ ಗಜೇಂದ್ರ ಆಗ್ರಹ
ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸೂಕ್ಷ್ಮ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು. ಸೂಕ್ತ ಕಾಲದಲ್ಲಿ ಒಬ್ಬ ವಿದ್ಯಾರ್ಥಿಗೆ ರಕ್ತ ಪರೀಕ್ಷೆ ನಡೆಸಿದ್ದರೆ ಒಂದು ಜೀವ ಉಳಿಯುತ್ತಿತ್ತು ಎಂದು ಗಮನ ಸೆಳೆದರು.
ಕೆಡಿಪಿ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ರಕ್ಷಣಾ, ಅಂಗನವಾಡಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದ ಗ್ರಾಮಾಡಳಿತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ತಾಕಿತು ಮಾಡಿದರು.