ಸಾಗರ : ಕ್ರೀಡೆ ಬದುಕಿಗೆ ಸ್ಪೂರ್ತಿಯಾಗಿದ್ದು, ಜೀವನದ ಭಾಗವಾಗಿ ಇರಬೇಕು ಎಂದು ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಹೇಳಿದರು.
ಅವರು ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲಾ ಮೈದಾನದಲ್ಲಿ ಶಿಕ್ಷಣ ಇಲಾಖೆ ಹಾಗೂ ಪ್ರಾರ್ಥನಾ ರಾಮಕೃಷ್ಣ ಶಾಲಾ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆನಂದಪುರ ವಲಯ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಸಾಂಸ್ಕೃತಿಕ ಅಭಿರುಚಿಗಳನ್ನು ಬೆಳೆಸುವ ಕೆಲಸ ಆಗಬೇಕಾಗಿದೆ. ಮಕ್ಕಳ ಪ್ರತಿಭೆಗಳಿಗೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡೆ ಅತಿ ಹೆಚ್ಚಿನ ಅವಶ್ಯಕತೆ ಇದೆ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆ. ಪ್ರಾಥಮಿಕ ಹಂತದಲ್ಲಿಯೇ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸ ಆಗಲಿ ಎಂದು ಹೇಳಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಮಾತನಾಡಿ, ಮಕ್ಕಳ ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಅಭಿರುಚಿಯನ್ನು ಬೆಳೆಸಿದಲ್ಲಿ ಅವರ ಮನಸ್ಸು ಉಲ್ಲಾಸಮಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಮಕ್ಕಳ ಮನಸ್ಸನ್ನು ಕ್ರಿಯಾಶೀಲವಾಗಿಸಲು ಕ್ರೀಡಾ ಚಟುವಟಿಕೆ ಅತಿ ಮುಖ್ಯವಾಗಿದೆ ಆ ನಿಟ್ಟಿನಲ್ಲಿ ಮಕ್ಕಳನ್ನು ಬೌದ್ಧಿಕವಾಗಿ ಹಾಗೂ ದೈಹಿಕವಾಗಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಬಾಲ್ಯಾವಸ್ಥೆಯಲ್ಲಿಯೇ ಕ್ರೀಡೆ ಹಾಗೂ ಸಾಂಸ್ಕೃತಿಕ ಮನೋಭಾವನೆಗಳನ್ನು ಬೆಳೆಸುವ ಕೆಲಸ ಆಗಬೇಕು. ಇತ್ತೀಚಿನ ದಿನಗಳಲ್ಲಿ ಕ್ರೀಡಾಸಕ್ತಿ ದೂರವಾಗುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಪೋಷಕರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಶಾಲಾ ಹಂತದಲ್ಲಿ ಕ್ರೀಡಾ ಮನೋಭಾವ ಮೂಡಿಸುವ ಕೆಲಸ ಆಗಬೇಕಾಗಿದೆ. ಇಂತಹ ಕ್ರೀಡೆಗಳ ಆಯೋಜನೆಯಿಂದ ಮಕ್ಕಳಲ್ಲಿ ಸೃಜನಶೀಲತೆ ತುಂಬಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾರ್ಥನಾ ಶಾಲೆಯ ಅಧ್ಯಕ್ಷರಾದ ದೇವರಾಜ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೂಕಾಂಬು, ನವಿನಾ ರವೀಂದ್ರ, ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕರಾದ ರಮೇಶ್, ಸಂಘದ ಪ್ರಮುಖರಾದ ರಾಜಶೇಖರ ಶೆಟ್ಟಿ, ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯರಾದ ಈಶ್ವರಪ್ಪ, ಇಂದಿರಾಗಾಂಧಿ ವಸತಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಾರ್ವತಿ, ಪ್ರಮುಖರಾದ ಕುಮಾರಸ್ವಾಮಿ ದೇವರಾಜ್ ಬಿಆರ್‌ಪಿಗಳಾದ ಭರಮಗೌಡ್ರು, ಚಂದ್ರನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇