ಸಾಗರ : ತಾಲ್ಲೂಕಿನ ಆನಂದಪುರ ಗ್ರಾಮ ಪಂಚಾಯಿತಿ ಅಧಿನದಲ್ಲಿರುವ ನೆಲ ಬಾಡಿಗೆ ಮಳಿಗೆ ತೊರೆಯುವಂತೆ ಆದೇಶ ನೀಡಲಾಗಿದೆ.
ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 62 ನೆಲಮಳಿಗೆ ಅಂಗಡಿಗಳಿವೆ. ಈ ಅಂಗಡಿಗಳು ಅನಧಿಕೃತ ಅಧಿಭೋಗದಲ್ಲಿ ಇರುವುದರಿಂದ ಖಾಲಿ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ನೀಡಿದ್ದಾರೆ.
ಸಾಗರ ತಾಲೂಕು ಆನಂದಪುರ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ನೆಲ ಬಾಡಿಗೆ ಮಳಿಗೆಗಳು ಅನಧಿಕೃತ ಅಧಿಭೋಗದಲ್ಲಿ ಇರುತ್ತೀರೆಂದು ಮನದಟ್ಟಾಗಿರುತ್ತದೆ. ಆದ್ದರಿಂದ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರ ಹಾಕುವ) ಅಧಿನಿಯಮ, 1974 ರ 5 ನೇ ಪ್ರಕರಣದ (1) ಮತ್ತು (2) ನೇ ಉಪಪ್ರಕರಣದನ್ವಯ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : RDPR/39/GPS/2021 ದಿನಾಂಕ 14.01.2022ರ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಆವರಣದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಅಧಿಭೋಗದಲ್ಲಿರುವ ಎಲ್ಲಾ ವ್ಯಕ್ತಿಗಳು ಈ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗೆ ಸದರಿ ಆವರಣವನ್ನು ಖಾಲಿ ಮಾಡಬೇಕೆಂದು ನಾನು ಈ ಮೂಲಕ ಆದೇಶ ಮಾಡಿದ್ದೇನೆ ಎಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಸಂಬಂಧ ಮೇಲೆ ನಿರ್ದಿಷ್ಟ ಪಡಿಸಿದ ಅವಧಿ ಒಳಗಾಗಿ ಈ ಆದೇಶವನ್ನು ಪಾಲಿಸಲು ನಿರಾಕರಿಸಿದ ಅಥವಾ ತಪ್ಪಿದ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳನ್ನು ಆವರಣದಿಂದ ಹೊರ ಹಾಕಬಹುದು ಮತ್ತು ಸ್ವಾಧೀನ ಪಡಿಸಿಕೊಳ್ಳಬಹುದು. ಆ ಉದ್ದೇಶಕ್ಕಾಗಿ ಅವಶ್ಯವಾಗಬಹುದಾದಷ್ಟು ಬಲಪ್ರಯೋಗದ ಮೂಲಕ ಹೊರ ಹಾಕುವಿಕೆಗೆ ಗುರಿಯತಕ್ಕದ್ದು ಎಂದು ಉಲ್ಲೇಖ ಮಾಡಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಹರಾಜು ಪ್ರಕ್ರಿಯೆ ಇನ್ನಾದರೂ ನಡೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಹರಾಜು ಪ್ರಕ್ರಿಯೆ ನಡೆದಿದ್ದೇ ಆದಲ್ಲಿ ಗ್ರಾಮ ಪಂಚಾಯಿತಿಯ ಆದಾಯ ಹೆಚ್ಚಾಗುವುದರ ಮೂಲಕ ನಮ್ಮ ಊರ ಬೆಳವಣಿಗೆಗೆ ಸಹಕಾರಿಯಾಗುತ್ತದೆ.






