ಸಾಗರ : ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ವಾತಾವರಣ ಕಲ್ಪಿಸಿದಾಗ ದೇಶವು ಪ್ರಗತಿ ಕಾಣಲು ಸಾಧ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ತಾಲ್ಲೂಕಿನ ನಂದಿತಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವಿವಿಧ ಶಾಲೆಗಳಿಗೆ ಧರ್ಮಾರ್ಥ ನಿಧಿಯಿಂದ ಅನುದಾನ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಉತ್ತಮ ಶಿಕ್ಷಣ ದೊರೆಯುವ ಮೂಲಕ ಶೈಕ್ಷಣಿಕ ಕ್ರಾಂತಿ ಆಗುತ್ತಿದೆ. ಶೈಕ್ಷಣಿಕ ಕ್ರಾಂತಿ ಇನ್ನಷ್ಟು ಆಗಬೇಕಾದರೆ ಸಾರ್ವಜನಿಕ ವಲಯದ ಸಹಕಾರ ಅತ್ಯಗತ್ಯವಾಗಿದೆ.
ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾದ ಮೇಲೆ ಸಹಕಾರ ಸಂಘಗಳ ಸಾಧಕ ಬಾದಕಗಳು ತಿಳಿಯುತ್ತಿದೆ. ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.
ರೈತರು ಕಡಿಮೆ ಬಡ್ಡಿದರ, ಸುಲಭ ಸಾಲದ ದೊರಕುವ ಸಹಕಾರಿ ಸಂಘಗಳತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು. ಕೇಂದ್ರದ ನಬಾರ್ಡ್ ಬ್ಯಾಂಕಿನಿಂದ 200 ಕೋಟಿ ಹಣ ಬರದಿದ್ದರೂ ಸಹ ರೈತರಿಗೆ ಯಾವುದೇ ತೊಂದರೆ ಇಲ್ಲದೆ ಸಾಲವನ್ನು ವಿತರಿಸಲಾಗಿದೆ. 200 ಕೋಟಿ ಹಣ ಬಂದಿದ್ದರೆ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು ಎಂದು ಹೇಳಿದರು.
ಮಲೆನಾಡು ಜನರ ಬಹುಬೆಡಿಕೆಯಾದ ಕಾಲು ಸಂಕ ಸಮಸ್ಯೆ ನಿವಾರಿಸಲಾಗುತ್ತಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ 234 ಕಾಲು ಸಂಕಗಳು ಮಂಜೂರಾಗಿರೋದು ವಿಶೇಷವಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಹಕಾರದಿಂದ ಕಾಲು ಸಂಕ ತಡೆಗೋಡೆಗಳಿಗೆ ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ರೈತರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಹೊಸದಾಗಿ ಅರಣ್ಯ ಒತ್ತುವರಿ ಕೆಲಸವನ್ನು ಮಾಡಬೇಡಿ. ಅರಣ್ಯ ಕಾನೂನು ಕಠಿಣವಾಗಿದೆ ಎಂದು ಎಚ್ಚರಿಕೆ ನೀಡಿದರು.
ನಂದಿತಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 18 ಸರ್ಕಾರಿ ಶಾಲೆಗಳಿಗೆ ಧರ್ಮಾರ್ಥ ನಿಧಿಯಿಂದ ಶಾಲೆಗಳಿಗೆ ಬೇಕಾದಂತಹ ಕಬ್ಬಿಣದ ಡೆಸ್ಕ್, ಟೇಬಲ್, ಕುರ್ಚಿ, ಕಲಿಕಾ ಸಾಧನ, ವಾಟರ್ ಫಿಲ್ಟರ್, ಪ್ರಿಂಟರ್, ಎಲ್ಇಡಿ ಟಿವಿ ಇನ್ನಿತರ ಕೊಡುಗೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಎ, ನಿರ್ದೇಶಕರುಗಳಾದ ನಾಗರಾಜ್, ದುರ್ಗಪ್ಪ, ಶರತ್ ನಾಗಪ್ಪ, ದಿನೇಶ್ ಎನ್, ಎಂ ಎಸ್ ವೇದಾಂತಪ್ಪ, ದೇವರಾಜ್ ಟಿ, ಮೇಘರಾಜ್, ನಾಗರಾಜ್, ಜಯಲಕ್ಷ್ಮಿ, ಕೃಷ್ಣವೇಣಿ, ಕ್ಷೇತ್ರಧಿಕಾರಿಗಳಾದ ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ