ಸಾಗರ: ಶಾಲೆಯಿಂದ ಬಿಟ್ಟು ಹೋಗಿದ್ದ ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಕಿಯೊಬ್ಬರು ಬರೋಬ್ಬರಿ 80 ಕಿ.ಮೀ ದೂರ ಪ್ರಯಾಣ ಮಾಡುವ ಮೂಲಕ ಶಿಕ್ಷಣ ಮಕ್ಕಳಿಗೆ ಎಷ್ಟು ಪ್ರಮುಖ ಎಂಬುವುದನ್ನು ಸಾರಿ ಹೇಳಿದ್ದಾರೆ. ಅಷ್ಟೇ ಅಲ್ಲ ಆ ಮಕ್ಕಳನ್ನು ಶಾಲೆಗೆ ಹಾಜರಾಗುವಂತೆ ಮಾಡುವ ಮೂಲಕ ಶಿಕ್ಷಕರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಸಹ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರ ತಾಲೂಕು ಹೊನ್ನೇಸರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಂತಿ ಹೆಚ್.ವಿ ಅವರು ತಮ್ಮ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗಾಗಿ ಸುಮಾರು 80 ಕಿ.ಮೀ ದೂರ ಸಾಗಿ, ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ, ಪುನಃ ವಿದ್ಯಾರ್ಥಿಗಳನ್ನು ಶಾಲೆಗೆ ಬರುವಂತೆ ಅರಿವು ಮೂಡಿಸಿದ್ದಾರೆ.
ಕಳೆದ ಜೂನ್ ತಿಂಗಳ ಮೊದಲ ಒಂದು ವಾರ ಶಾಲೆಗೆ ಬಂದಿದ್ದ ಐದನೇ ತರಗತಿಯ ವಿದ್ಯಾರ್ಥಿ ಹಾಗೂ ಮೂರನೇ ತರಗತಿಯ ವಿದ್ಯಾರ್ಥಿನಿ ಶಾಲೆಯ ಸಮವಸ್ತ್ರ ಹಾಗೂ ಪುಸ್ತಕಗಳನ್ನು ತೆಗೆದುಕೊಂಡು ಹೋದವರು ಪುನಃ ಶಾಲೆಗೆ ಹಾಜರಾಗಿರಲಿಲ್ಲ. ಇಲ್ಲಿಯ ಶಿಕ್ಷಕರು ಇಲಾಖೆಯ ನಿಯಮದ ಪ್ರಕಾರ ಮಕ್ಕಳ ಮನೆಗೆ ಹತ್ತಾರು ಬಾರಿ ಭೇಟಿ ನೀಡಿದ್ದರು. ಆ ಎಲ್ಲ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಸಂಪರ್ಕಕ್ಕೆ ಯಾವುದೇ ದೂರವಾಣಿ ಸಂಖ್ಯೆಯೂ ಸಿಕ್ಕಿರಲಿಲ್ಲ. ಈ ಕುರಿತು ಅನಿವಾರ್ಯವಾಗಿ ಮುಖ್ಯಶಿಕ್ಷಕರು ಸಿಆರ್ ಪಿ ಯ ಅವರ ಮೂಲಕ, ಮೇಲಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದರು.
ಮಕ್ಕಳನ್ನು ಶಾಲೆಗೆ ಕರೆತರಲು ಪಣತೊಟ್ಟ ಶಿಕ್ಷಕಿ
ವಿದ್ಯಾರ್ಥಿಗಳು ಅವರ ಅಜ್ಜಿಮನೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯ ಸಮೀಪ ಕುಂಬಾರಗೊಳಿ ಎನ್ನುವ ಊರಿನಲ್ಲಿರುವ ಮಾಹಿತಿ ತಿಳಿದುಬಂದಿತ್ತು. ಅದರಂತೆ ಶಿಕ್ಷಕಿ ಜಯಂತಿ ಅವರು ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಪರಿಚಯವಿದ್ದ ಸ್ಥಳೀಯರ ಮೂಲಕ ಮಕ್ಕಳಿದ್ದ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಮಕ್ಕಳ ತಾಯಿ ಹಾಗೂ ಅವರ ಬಂಧುಗಳಿಗೆ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ಶಾಲೆ ಬಿಡಿಸದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳಿಬ್ಬರನ್ನೂ ಜೊತೆಗೆ ಕೂರಿಸಿಕೊಂಡು ಮಾತನಾಡಿ ಅವರ ಆಸಕ್ತಿ ಗಮನಿಸಿ ಸೋಮವಾರದಿಂದಲೇ ಶಾಲೆಗೆ ಬರುವುದಕ್ಕೆ ಒಪ್ಪಿಸಿದ್ದಾರೆ.
ಶಿಕ್ಷಕಿಯ ಕೆಲಸಕ್ಕೆ ಶ್ಲಾಘನೆ
ಶಾಲೆ ಬಿಟ್ಟ ಮಕ್ಕಳನ್ನು ಕರೆ ತರಲು ಶಿಕ್ಷಕಿ ಒಟ್ಟು 160 ಕಿ.ಮೀ ಪ್ರಯಾಣ ಮಾಡಿ, ಆ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಎಲ್ಲೆಡೆ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.
ಶಿಕ್ಷಣದ ಮಹತ್ವ ಮಕ್ಕಳಿಗೆ ತಿಳಿಸಲಾಯಿತು – ಶಿಕ್ಷಕಿ ಜಯಂತಿ
ಕಳೆದ ಜೂನ್ ತಿಂಗಳಿನಿಂದ ಇವರಿಬ್ಬರು ಶಾಲೆಗೆ ಬರುತ್ತಿರಲಿಲ್ಲ. ನಮ್ಮ ಶಾಲೆಯ ಮುಖ್ಯಶಿಕ್ಷಕ ನೂರ್ ಅಹಮದ್, ಸಿಆರ್ ಪಿ ಶೀಲಾ ಎ.ಎಂ ಹಾಗೂ ನಾವೆಲ್ಲಾ ಸಹ ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಕರೆತರುವ ಸಲುವಾಗಿ ಇವರ ಮನೆಗೆ ಹೋದಾಗ ಇವರ ಮನೆಗೆ ಬೀಗ ಹಾಕಿತ್ತು. ಇವರು ಎಲ್ಲಿದ್ದಾರೆಂಬ ಮಾಹಿತಿ ನಮಗೆ ಸಿಕ್ಕಿರಲಿಲ್ಲ. ನಂತರ ಅವರ ಅಜ್ಜಿಮನೆಯಲ್ಲಿದ್ದಾರೆಂಬ ಮಾಹಿತಿ ಸಿಕ್ಕಿತು.
ಸಾಗರ ಬಿಇಒ ಮಾರ್ಗದರ್ಶನದಂತೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಗೆ ವೈಯಕ್ತಿಕವಾಗಿ ತೆರಳಿ ಅಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಇರುವ ಕುಂಬಾರಗೊಳಿ ಎಂಬ ಗ್ರಾಮಕ್ಕೆ ತೆರಳಿದಾಗ ಮಕ್ಕಳು ಅಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಅಲ್ಲಿಗೆ ಹೋದಾಗ ಅವರಿಬ್ಬರು ಅಜ್ಜಿ ಮನೆಯಲ್ಲಿ ಇರುವುದು ತಿಳಿಯಿತು. ಅಲ್ಲಿಗೆ ಹೋಗಿ ವಿದ್ಯಾರ್ಥಿಗಳ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಲಾಯಿತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೇಳಲಾಯಿತು. ಮಕ್ಕಳಿಗೂ ಸಹ ಶಿಕ್ಷಣದ ಬಗ್ಗೆ ತಿಳಿಸಲಾಯಿತು. ಸೋಮವಾರ ಮಕ್ಕಳನ್ನು ಶಾಲೆಗೆ ಕಳುಹಿಸುವ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
ಸುದ್ದಿಯ ಸಂಪೂರ್ಣ ವಿಡಿಯೋ ಇಲ್ಲಿದೆ 👇👇👇👇👇