ಶಿವಮೊಗ್ಗ : ಧರ್ಮಸ್ಥಳ ವಿರುದ್ಧದ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್ ಅರುಣ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಆರಂಭವಾದ ಅಧಿವೇಶನದ ಮೊದಲ ದಿನವೇ ಧರ್ಮಸ್ಥಳದ ಪ್ರಕರಣ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.
ರಾಜ್ಯದ ಧಾರ್ಮಿಕ ಹೆಮ್ಮೆ ಮತ್ತು ಲಕ್ಷಾಂತರ ಹಿಂದೂ ಭಕ್ತರ ಭಾವನೆಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಯಾವುದೇ ದೃಢವಾದ ಸಾಕ್ಷಿವಿಲ್ಲದೆ ಅನಾಮಿಕ ವ್ಯಕ್ತಿ ಮಾಡಿದ ಆರೋಪವನ್ನು ತೀವ್ರವಾಗಿ ಖಂಡಿಸಿದರು.
ಇಂತಹ ಸುಳ್ಳು ಮತ್ತು ಉದ್ದೇಶಪೂರಿತ ಆರೋಪಗಳಿಂದ ಸನಾತನ ಧರ್ಮದ ಪಾವಿತ್ರಕ್ಕೆ ಧಕ್ಕೆ ತರುತ್ತಿರುವುದು ಧರ್ಮ ವಿರೋಧಿ ಶಕ್ತಿಗಳ ಹಳೆಯ ತಂತ್ರ. ಸರ್ಕಾರ ನೀತಿಯನ್ನು ಅನುಸರಿಸಿ ಆರೋಪದ ಹಿಂದೆ ಇರುವ ನಿಜ ಸ್ವರೂಪವನ್ನು ತಕ್ಷಣ ಬಹಿರಂಗ ಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ತನಿಖೆಯನ್ನು ತ್ವರಿತಗೊಳಿಸಲು ಗೃಹ ಸಚಿವರ ಮೂಲಕ ಪ್ರಗತಿ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಹಾಗೂ ಹಿಂದೂ ಧರ್ಮದ ಪಾವಿತ್ರ್ಯವನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.