ಸಾಗರ : ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಡೆಕ್ ಸ್ಲಾಬ್ ಕುಸಿದಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚಾರ ಮಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 69 ಆನಂದಪುರ ಸಮೀಪದ ಗಿಳಾಲಗುಂಡಿ ಬಳಿ ಡೆಕ್ ಸ್ಲಾಬ್ ಕುಸಿದು ಹೋಗಿದೆ. ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ.
ವಾರದ ಕೊನೆಯಲ್ಲಿ ರಜೆ ದಿನಗಳು ಇರುವುದರಿಂದ ವಾಹನಗಳ ಸಂಚಾರವೂ ಹೆಚ್ಚಾಗಿರುತ್ತದೆ. ಸ್ಲಾಬ್ ಕುಸಿತ ಕಂಡ ಕಾರಣ ದ್ವಿಮುಖವಾಗಿ ಸಂಚರಿಸುವ ವಾಹನಗಳು ರಸ್ತೆಯ ಒಂದೇ ಬದಿಯಲ್ಲಿ ಸಂಚರಿಸಬೇಕಾಗಿದೆ. ಇದು ಅಪಘಾತಕ್ಕೆ ಕಾರಣವಾಗಬಹುದು. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನಗಳು ವೇಗವಾಗಿಯೇ ಚಲಿಸುತ್ತಿರುತ್ತವೆ. ಒಮ್ಮೆಲೇ ಕುಸಿತ ಕಂಡ ರಸ್ತೆಯನ್ನು ವಾಹನ ಸವಾರರು ನೋಡಿದಾಗ ಅವಸರಕ್ಕೆ ಒಳಗಾಗಿ ಸಂಚಾರದ ದಿಕ್ಕು ಬದಲಾಯಿಸಿದರೆ ಅಪಘಾತವಾಗುತ್ತದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.
ಹಲವು ದಿನಗಳು ಕಳೆದರೂ ಸಹ ಗಮನಹರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾಷ್ಟ್ರೀಯ ಹೆದ್ದಾರಿ 69 ಗಿಳಾಲಗುಂಡಿ ಸಮೀಪ ಡೆಕ್ ಸ್ಲಾಬ್ ಕುಸಿದುಕೊಂಡು ಹಲವು ದಿನಗಳು ಕಳೆದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇತ್ತ ಗಮನ ಹರಿಸದಿರುವುದು ವಾಹನ ಸವಾರರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಅನಾಹುತ ಆಗುವುದರೊಳಗೆ ಅಧಿಕಾರಿಗಳು ಗಮನಹರಿಸಲಿ
ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಬೆಂಗಳೂರಿನಿಂದ ಹೊನ್ನಾವರ ಮುಂತಾದ ಕಡೆ ಭಾರಿ ಗಾತ್ರದ ಲಾರಿಗಳು ಸಂಚರಿಸುತ್ತಿರುತ್ತವೆ. ಇದರಿಂದ ಇನ್ನಷ್ಟು ಸ್ಲಾಬ್ ಕುಸಿತ ಕಾಣುವ ಸಾಧ್ಯತೆ ಇದೆ. ಇನ್ನಷ್ಟು ಕುಸಿತ ಕಂಡು ಹೆದ್ದಾರಿ ಬಂದ್ ಆಗುವುದರೊಳಗೆ ಹಾಗೂ ಅಪಘಾತ ಸಂಭವಿಸುವುದರೊಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದರು ಇತ್ತ ಗಮನ ಹರಿಸಬೇಕು ಎನ್ನುವುದು ವಾಹನ ಸವಾರರ ಆಶಯವಾಗಿದೆ.
ಹೆದ್ದಾರಿಯಲ್ಲಿ ಬಿದ್ದ ನೂರಾರು ಗುಂಡಿಗಳು
ರಾಷ್ಟ್ರೀಯ ಹೆದ್ದಾರಿಯಲ್ಲಿ ಆನಂದಪುರದಿಂದ ತುಪ್ಪೂರು ಗ್ರಾಮದವರೆಗೆ ನೂರಾರು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸರ್ಕಸ್ ಮಾಡಿ ಸಂಚರಿಸುವಂತಾಗಿದೆ. ಗುಂಡಿ ಮುಚ್ಚುವ ಕೆಲಸವನ್ನು ಆದಷ್ಟು ಬೇಗ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುವ ನೀರು
ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಹಲವು ಕಡೆ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಪ್ರಮುಖವಾಗಿ ಚೋರಡಿ ಬಳಿ ಸಂಪೂರ್ಣ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಹಾಳಾಗುವುದಲ್ಲದೆ ವಾಹನ ಸವಾರರು ನಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ಚೋರಡಿ ಬಳಿ ಮಳೆಗಾಲದಲ್ಲಿ ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸುವುದು ಅಸಾಧ್ಯವಾಗಿದೆ. ನಡು ರಸ್ತೆಯಲ್ಲಿ ಹೋಗೋಣವೆಂದರೆ ದೊಡ್ಡ ವಾಹನಗಳ ಸಂಚಾರ, ರಸ್ತೆ ಬದಿಯಲ್ಲಿ ಹೋಗೋಣವೆಂದರೆ ನೀರು. ಹಾಗಾಗಿ ಸಂಕಷ್ಟದಲ್ಲಿ ಸಂಚರಿಸುವಂತೆ ಆಗಿದೆ.